ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನಾದ್ಯಂತ ಇತ್ತೀಚೆಗೆ ಇಸ್ಪೀಟ್ ಅಂದರ್-ಬಾಹರ್ ಮತ್ತು ಓಸಿ ಆಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ಹಲವು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇದಕ್ಕೆ ನಿಯಂತ್ರಣ ಯಾವಾಗ ಎಂಬ ಪ್ರಶ್ನೆ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ತಾಲೂಕಿನ ಪ್ರಜ್ಞಾವಂತರನ್ನು ಕಾಡುತ್ತಿದೆ.
ತಾಲೂಕಿನ ಹಳ್ಳ-ಕೊಳ್ಳಗಳ ದಂಡೆಯಲ್ಲಿ, ಜಮೀನುಗಳ ಪಕ್ಕದಲ್ಲಿ, ಕೆಲ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಿತ್ಯವೂ ರಾಜಾರೋಷವಾಗಿ, ವ್ಯವಸ್ಥಿತವಾಗಿ, ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವುದಕ್ಕೆ ಆಯಾ ಸ್ಥಳಗಳಲ್ಲಿ ಹರಡಿ ಬಿದ್ದಿರುವ ಇಸ್ಪೀಟ್ ಎಲೆಗಳೇ ಸಾಕ್ಷಿಯಾಗುತ್ತಿವೆ. ಇತ್ತೀಚೆಗೆ ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ ಛಬ್ಬಿ ಅರಣ್ಯ ಪ್ರದೇಶದಲ್ಲಿ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ಇಸ್ಪೀಟ್ ಎಲೆಗಳನ್ನು ಕಂಡು ತಮ್ಮ ಸಿಬ್ಬಂದಿಗೆ ಇದರ ಬಗ್ಗೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ.
ನಿತ್ಯವೂ ನಡೆಯುತ್ತಿರುವ ಇಸ್ಪೀಟ್ ಜೂಜಾಟ ಅಡ್ಡೆಗಳ ಮೇಲೆ ದಾಳಿ ನಡೆಸಿ ನಿಯಂತ್ರಣಕ್ಕೆ ತರಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಅಕ್ರಮ ಜೂಜಾಟದಲ್ಲಿ ತೊಡಗಿರುವವರ ವಿರುದ್ಧ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಸೂಕ್ತ ಕ್ರಮ ಕೈಗೊಳ್ಳುವುದು ಅವಶ್ಯವಿದೆ.
ಜಿಲ್ಲೆಯ ಪೊಲೀಸಿಂಗ್ ವ್ಯವಸ್ಥೆಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸಲು ಹಲವಾರು ಸಾರ್ವಜನಿಕ ಉಪಯೋಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ವ್ಯವಸ್ಥಿತವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕ್ರಿಯಾಶೀಲರಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ತಾಲೂಕಿನಲ್ಲಿ ನಡೆಯುತ್ತಿರುವ ಇಂತಹ ಅಕ್ರಮ ಇಸ್ಪೀಟ್ ಮತ್ತು ಓಸಿ ನಿಯಂತ್ರಿಸಿ ಬಡ ಕುಟುಂಬಗಳನ್ನು ರಕ್ಷಿಸಬೇಕೆಂದು ತಾಲೂಕಿನ ಜನತೆಯ ಒತ್ತಾಯವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಕ್ರಮ ಇಸ್ಪೀಟ್ ಜೂಜಾಟಕ್ಕೆ ಅವಕಾಶವಿಲ್ಲ. ಒಂದು ವೇಳೆ ಕಂಡು ಬಂದರೆ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ವಿಶೇಷ ತಂಡವನ್ನು ಕಳುಹಿಸಿ ಪತ್ತೆ ಹಚ್ಚಿ ರೇಡ್ ಮಾಡಿಸಲಾಗುವುದು ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಅಕ್ರಮ ಇಸ್ಪೀಟ್, ಓಸಿ, ಚಕ್ರ ಬಡ್ಡಿ ವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ಬಗ್ಗೆ ಅನೇಕ ದೂರುಗಳು ನನ್ನ ಗಮನಕ್ಕೆ ಬಂದಿದೆ. ಇದರಿಂದ ಅನೇಕ ಕುಟುಂಬಗಳು ಬೀದಿ ಪಾಲಾಗುತ್ತಿವೆ. ಈ ಬಗ್ಗೆ ಸ್ಥಳೀಯ ಪೊಲೀಸರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.