ಬೆಂಗಳೂರು:-ಇಸ್ರೇಲ್ ನಲ್ಲಿ ಸಿಲುಕಿದ್ದ ಕನ್ನಡಿಗರು ತಾಯ್ನಾಡಿಗೆ ಸೇಫ್ ಆಗಿ ವಾಪಸ್ ಆಗಿದ್ದಾರೆ. ಇಸ್ರೇಲ್ ನಲ್ಲಿ ಸಿಲುಕಿದ್ದ 18 ಕನ್ನಡಿಗರು ಕುವೈತ್ ನಿಂದ ಮುಂಬೈಗೆ ಬಂದು ಅಲ್ಲಿಂದ ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಇಸ್ರೇಲ್‍ನಿಂದ ಬೆಂಗಳೂರಿನ ವಿಮಾನನಿಲ್ದಾಣಕ್ಕೆ ಬಂದಿಳಿದ ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ಕನ್ನಡತಿ ಮಾಧುರಿ ಮಾತನಾಡಿ, ಕರ್ನಾಟಕದ ಬಿ-ಪ್ಯಾಕ್ ನಿಯೋಗದಿಂದ 18 ಜನರ ತಂಡ ಅಧ್ಯಯನಕ್ಕೆಂದು ಇಸ್ರೇಲ್‍ಗೆ ತೆರಳಿದ್ದೆವು. ಯುದ್ಧದ ಸನ್ನಿವೇಶದ ವಿಷಯ ತಿಳಿದ ಕೂಡಲೇ ಭಯ ಹೆಚ್ಚಾಯಿತು. ನಾವು ಪ್ರತಿಷ್ಠಿತ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದೆವು. ಯುದ್ಧದ ಸೈರನ್ ಆಗುತ್ತಿದ್ದಂತೆ ನಮ್ಮ ಬಿಪ್ಯಾಕ್ ನಿಯೋಗ ಬಂಕರ್‌ಗೆ ತೆರಳಿತು. ಸದ್ಯ ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರದ ಸಚಿವರು, ಇಸ್ರೇಲ್‍ನಲ್ಲಿದ್ದ ಭಾರತದ ರಾಯಭಾರಿ ಸೇರಿದಂತೆ ಹಲವರು ಸಹಕಾರದಿಂದ ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ಬರಲು ಸಾಧ್ಯವಾಯಿತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಬಳಿಕ ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಮಾತನಾಡಿ, ಅಧ್ಯಯನಕ್ಕೆಂದು ಜೂನ್ 7 ರಂದು ತೆರಳಿದ್ದೆವು. ಅಧ್ಯಯನ ಎಲ್ಲಾ ಮುಗಿಸಿ ವಾಪಸ್ ನಾಳೆ ಹೋಗಬೇಕು ಎಂದುಕೊಂಡಾಗ ಯುದ್ದ ಪ್ರಾರಂಭವಾಯಿತು. ಯುದ್ದದ ಭೀಕರ ಬಹಳ ಜೋರಾಗಿತ್ತು. ಭಂಕರ್ ನಲ್ಲಿ ಬಿಸ್ಕತ್ತು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಸರಕಾರ ಸೂಕ್ತ ವ್ಯವಸ್ಥೆ ಮಾಡಿತ್ತು. ನಮ್ಮ ಜೊತೆಯಲ್ಲಿ ಅಲ್ಲಿನ ಜನಪ್ರತಿನಿಧಿ ಇದ್ದರು. ರಾತ್ರಿ ಯುದ್ದ ನಡೆದು, ಬೆಳಗ್ಗೆ ಎದ್ದು ನೋಡಿದರೆ ಸ್ಥಳ ಗುರುತು ಸಿಗುತ್ತಿರಲಿಲ್ಲ. ಕೊನೆಗೆ ಸರಕಾರದ ಶ್ರಮದಿಂದ ನಮಗೆ ಯಾವುದೇ ತೊಂದರೆ ಆಗದಂತೆ ವಾಪಸ್ ಆಗಿದ್ದೇವೆ. ವಾಪಸ್ ಬೆಂಗಳೂರಿಗೆ ಬಂದಿದ್ದು ಬಹಳ ಸಂತೋಷವಾಯಿತು ಎಂದರು.