ಟೆಲ್ ಅವೀವ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ಗಂಭೀರಗೊಂಡಿದ್ದು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇಂದು ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ಪ್ರಧಾನಿ ಕಚೇರಿಗೆ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ, ಪ್ರತೀಕಾರವಾಗಿ ಇಸ್ರೇಲ್ ಹಾಗೂ ಇತರೆ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಇರಾನ್ ದಾಳಿಯನ್ನು ತೀವ್ರಗೊಳಿಸಿದೆ ಎಂದು ಹೇಳಲಾಗಿದೆ.
ಇರಾನ್ ನೀಡಿದ ಮಾಹಿತಿಯಂತೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ, ಹೈಫಾ ನಗರದಲ್ಲಿನ ಭದ್ರತಾ ಮತ್ತು ಸೈನಿಕ ಕೇಂದ್ರಗಳು ಹಾಗೂ ಪೂರ್ವ ಜೆರುಸಲೆಮ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
‘ಜಿಯೋನಿಸ್ಟ್ ಆಡಳಿತದ ಕ್ರಿಮಿನಲ್ ಪ್ರಧಾನಿಯ ಕಚೇರಿ ಹಾಗೂ ವಾಯುಪಡೆಯ ಕಮಾಂಡರ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಲಾಗಿದೆ’ ಎಂದು ಇರಾನ್ ಹೇಳಿದೆ. ದಾಳಿಯಲ್ಲಿ ಖೈಬರ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.
ಇನ್ನೊಂದೆಡೆ, ಅಮೆರಿಕ–ಇಸ್ರೇಲಿ ಏರ್‌ಸ್ಟ್ರೈಕ್‌ಗಳಿಂದ ಇರಾನಿನಲ್ಲಿ ಕನಿಷ್ಠ 555 ಜನರು ಸಾವನ್ನಪ್ಪಿರುವುದಾಗಿ ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಶನಿವಾರದಿಂದ ಅಮೆರಿಕ ಮತ್ತು ಇಸ್ರೇಲ್ ಇರಾನಿನಾದ್ಯಂತ ದಾಳಿಗಳನ್ನು ಮುಂದುವರಿಸುತ್ತಿವೆ.
ಖಮೇನಿ ಹತ್ಯೆಯಿಂದ ಪ್ರಾರಂಭವಾದ ಈ ಸಂಘರ್ಷ ಇದೀಗ ಸಂಪೂರ್ಣ ಪ್ರದೇಶವನ್ನು ಆವರಿಸಿದೆ. ದುಬೈ, ಬಹ್ರೇನ್, ಇರಾಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ಫೋಟಗಳ ಸದ್ದು ಕೇಳಿಬರುತ್ತಿದೆ ಎಂದು ವರದಿಗಳು ತಿಳಿಸಿವೆ.



