ವಿಜಯಸಾಕ್ಷಿ ಸುದ್ದಿ, ಗದಗ : ಎಂ.ಎಸ್ಸಿ. ಜಿಯೋಇನ್ಫರ್ಮ್ಯಾಟಿಕ್ಸ್/ಎಂ.ಎಸ್ಸಿ. ಕಂಪ್ಯೂಟರ್ ಸೈನ್ಸ್ /B.Sc. GIS/CS ವಿಭಾಗಗಳ ವತಿಯಿಂದ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗದಲ್ಲಿ ಶುಕ್ರವಾರ ಮಧ್ಯಾಹ್ನ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಸಾಮಾಜಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಪ್ರಗತಿಯಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಪಾತ್ರವನ್ನು ಮನದಟ್ಟು ಮಾಡಿಕೊಡುವ ದೃಷ್ಟಿಯಿಂದ `ಇಸ್ರೋ ಯೋಜನೆಗಳು ಮತ್ತು ಸಾಮಾಜಿಕ ಪ್ರಯೋಜನಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಆರ್.ವಿ. ನಾಡಗೌಡ, ಹೆಮ್ಮೆಯ ಇಸ್ರೋದ ಸ್ಪೂರ್ತಿದಾಯಕ ಸನ್ನಿವೇಶಗಳು, ಕುತೂಹಲಕಾರಿ ಕಾರ್ಯವೈಖರಿಯನ್ನು ತಿಳಿಸುತ್ತಾ, ಇಸ್ರೋ ಮಿಷನ್‌ಗಳು ಮತ್ತು ಸಾಮಾಜಿಕ ಪ್ರಯೋಜನಗಳು, ಇಸ್ರೋದ ವಿಕಾಸ, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಅದರ ಪ್ರಮುಖ ಪಾತ್ರ ಮತ್ತು ರಾಷ್ಟ್ರೀಯ ಅಭಿವೃದ್ಧಿ ಹಾಗೂ ಜನರ ಜೀವನಮಟ್ಟದ ಅಭಿವೃದ್ಧಿಗಾಗಿ ಭಾರತೀಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳ ಬಳಕೆ ಕುರಿತು ಸಮಗ್ರವಾದ ಉಪನ್ಯಾಸವನ್ನು ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಾ. ಸುರೇಶ ವಿ.ನಾಡಗೌಡರ ಇಸ್ರೋದ ಸಾಧನೆಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡಿದ ಕೊಡುಗೆಗಳ ಕುರಿತು ಚರ್ಚೆಗೆ ಪೂರಕವಾಗಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಇಸ್ರೋದ ಬಹುಮುಖಿ ಕೊಡುಗೆಗಳ ಸಮಗ್ರ ತಿಳುವಳಿಕೆಯನ್ನು ಒದಗಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಉಪಕುಲಪತಿ ಪ್ರೊ. ವಿಷ್ಣುಕಾಂತ್ ಎಸ್.ಚಟಪಲ್ಲಿ ಭಾರತದ ಪ್ರಗತಿಗಾಗಿ ಇಸ್ರೋ ಕೈಗೊಂಡಿರುವ ಹಲವಾರು ಪ್ರಯತ್ನಗಳು ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ತಿಳಿಸಿದರು.
ರಾಷ್ಟ್ರೀಯ ಪ್ರಗತಿಗಾಗಿ ಇಸ್ರೋ ಜೊತೆಗಿನ ಸಹಯೋಗದ ಮತ್ತಷ್ಟು ಮಾರ್ಗಗಳನ್ನು ಅನ್ವೇಷಿಸಲು ಅವರನ್ನು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ಭಾಗವಹಿಸಿದ್ದರು.