ವಿಜಯಸಾಕ್ಷಿ ಸುದ್ದಿ, ಗದಗ: ನಗರದ ತ್ರಿಕೂಟೇಶ್ವರ ದೇವಸ್ಥಾನದಿಂದ ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನದವರೆಗೆ ನೂರಾರು ನಾಗಾಸಾಧುಗಳ ನೇತೃತ್ವದಲ್ಲಿ 9 ಅಗ್ನಿಕುಂಡ ಅತಿರುದ್ರ ಮಹಾಯಜ್ಞ, ಕಿರಿಯ ಕುಂಭಮೇಳ ನಡೆಯಲಿದೆ. ನಮ್ಮ ಜೀವಿತಾವಧಿಯಲ್ಲಿ ಇಂತಹ ಯಜ್ಞದಲ್ಲಿ ಭಾಗವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಸಿ.ಸಿ. ಪಾಟೀಲ ಹೇಳಿದರು.
ನಗರದ ವಿದ್ಯಾದಾನ ಶಿಕ್ಷಣ ಸಮಿತಿ ಮೈದಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾಂತ ಸಹದೇವಾನಂದ ಗಿರಿಜೀ ಮಹಾರಾಜರು ನೇತೃತ್ವ ವಹಿಸಿಕೊಳ್ಳಲಿದ್ದು, 5 ಸಾವಿರ ಮಹಿಳೆಯರು ಕುಂಭಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಒಂಬತ್ತು ಅಗ್ನಿಕುಂಡಗಳಲ್ಲಿ ಯಜ್ಞ, ಯಾಗ ನಡೆಯಲಿದೆ. ಹಿಮಾಲಯದಲ್ಲಿ ತಪಸ್ಸು ಮಾಡಿದ ನೂರು ನಾಗಾಸಾಧುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಹಾನ್ ತಪಸ್ವಿ ನಾಗಾಸಾಧುಗಳನ್ನು ನೋಡುವ ಸೌಭಾಗ್ಯ, ಅವರ ತಪಸ್ಸಿನ ಫಲ ಗದಗ ಹಾಗೂ ಸುತ್ತಮುತ್ತಲಿನ ಜನತೆಗೆ ಸಿಗಲಿದೆ. ಉತ್ತರ ಭಾರತದಲ್ಲಿ ಸಿಗುವ ಸಾವಿರ ಧಾನ್ಯ, ದೇಶ-ವಿದೇಶಗಳ 900 ನದಿಗಳ ನೀರು, 200 ವೈದಿಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 18ರಂದು ಬೃಹತ್ ಧರ್ಮಸಭೆ ನಡೆಯಲಿದೆ. ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮಕ್ಕೆ 3 ಕೋಟಿಗೂ ಅಧಿಕ ಮೊತ್ತ ವೆಚ್ಚವಾಗಲಿದೆ. ಹಲವಾರು ದಾನಿಗಳು ಕಾರ್ಯಕ್ರಮ ಯಶಸ್ವಿಗೆ ಸಹಾಯ-ಸಹಕಾರ ನೀಡಿದ್ದಾರೆ. ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರ ಪ್ರಯೋಜನ ಗದಗ-ಬೆಟಗೇರಿ ನಗರದ ಜನತೆಗೆಷ್ಟೇ ಅಲ್ಲದೆ ರಾಜ್ಯದ ಜನತೆಗೆ ಆಗಲಿ ಎಂಬುದು ನಮ್ಮ ಆಶಯ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಾಗಾಸಾಧುಗಳ ಹಾಗೂ ಸಂತರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಾಜಕಾರಣ ಹೊರತುಪಡಿಸಿ ಎಲ್ಲ ಸಮಾಜದ ಜನರು ಭಾಗವಹಿಸಲಿದ್ದಾರೆ. ಪಕ್ಷದ ಚಿನ್ಹೆಯನ್ನು ಹೊರಗಿಟ್ಟು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಸನಾತನ ಧರ್ಮದ ಜಾಗೃತಿ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಯಜ್ಞದರ್ಶನ ಪಡೆಯುವ ದಂಪತಿಗಳು ಶುದ್ಧ ಮಡಿಯಿಂದ ಬರಬೇಕು. ಯಜ್ಞಕುಂಡದಲ್ಲಿ ಮೊದಲ ದಿನ ಭಾಗವಹಿಸುವವರು ಸಾತ್ವಿಕ ಆಹಾರ ಸೇವಿಸಿ ಸತತ ಏಳು ದಿನ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ರವಿ ದಂಡಿನ್, ರಾಜು ಕುರಡಗಿ, ಪ್ರಶಾಂತ್ ನಾಯ್ಕರ್, ರವಿ ಗುಂಜೀಕರ, ಬಸವರಾಜ ಬಿಂಗಿ, ಬಿ.ಬಿ. ಅಸೂಟಿ, ವಿಜಯಲಕ್ಷ್ಮಿ ಮಾನ್ವಿ, ಅಶ್ವಿನಿ ಜಗತಾಪ ಮುಂತಾದವರು ಉಪಸ್ಥಿತರಿದ್ದರು.
ನಗರದಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೈಸೂರಿನ ರಾಜ ಮನೆತನದ ಅರಸ ಯದುವೀರ ಕೃಷ್ಣದತ್ತ ಒಡೆಯರು ಆಗಮಿಸಲಿದ್ದಾರೆ. ಸಮಿತಿಯಿಂದ ಈಗಾಗಲೇ ಅವರಿಗೆ ಆಮಂತ್ರಣ ನೀಡಿದ್ದು, ಅತೀ ಶೀಘ್ರದಲ್ಲಿ ಭಾಗವಹಿಸುವ ದಿನಾಂಕ ತಿಳಿಸಲಿದ್ದಾರೆ.
ಕಿರಣ್ ಭೂಮಾ,
ಸಮಿತಿಯ ಅಧ್ಯಕ್ಷರು.


