ಶಿವಮೊಗ್ಗ:- ಯಾರು ಏನೇ ಹೇಳಿದರೂ ಕಾರ್ಯಕರ್ತರು ನನ್ನನ್ನು ಒಪ್ಪಿದ್ದಾರೆ ಅಷ್ಟೇ ಸಾಕು ಎಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ವಿಜಯೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರನನ್ನು ನಾನು ಒಪ್ಪುವುದಿಲ್ಲ’ ಎಂದು ತಮ್ಮದೇ ಪಕ್ಷದ ನಾಯಕನ ವಿರುದ್ಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದು ಅಸಮಾಧಾನ ಹೊರಹಾಕಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಯಾರು ಏನೇ ಹೇಳಿದರೂ ಕಾರ್ಯಕರ್ತರು ನನ್ನನ್ನು ಒಪ್ಪಿದ್ದಾರೆ. ನಾನು ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಯಾರು ಏನೇ ಮಾತನಾಡಿದರೂ ವಿಜಯೇಂದ್ರನಾದ ನಾನೇ ರಾಜ್ಯಾಧ್ಯಕ್ಷ ಎಂಬುದಂತೂ ಸತ್ಯ. ನನ್ನ ರಾಜ್ಯಾಧ್ಯಕ್ಷನಾಗಿ ಘೋಷಿಸಿದ್ದು ಪಕ್ಷದ ಹೈಕಮಾಂಡ್. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷ ಎಂದು ಘೋಷಿಸಿದವರು ಎಂದು ಬಿ.ವೈ ವಿಜಯೇಂದ್ರ ಇಂದು ಹೇಳಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ವಿರೋಧಿ ಮನಸ್ಥಿತಿ ಬಂದಿದೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ನಡೆದಿದೆ.
ಪೆಟ್ರೋಲ್ ಬಾಂಬ್ ಹಾಕಿ ಅಂಗಡಿಗಳನ್ನ ಸುಟ್ಟು ಹಾಕಿದ್ದಾರೆ. ಪಾಂಡವಪುರದಲ್ಲಿನ ಆರ್ಎಸ್ಎಸ್ ಕಚೇರಿ ಮೇಲೆ ಪೊಲೀಸರ ದಾಳಿ ನಡೆದಿದೆ. ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಹೀಗೆ ಮಾಡುತ್ತಿದ್ದಾರೆ. ಇದು ರಣಹೇಡಿ ಸರ್ಕಾರ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.