ವಿಜಯಸಾಕ್ಷಿ ಸುದ್ದಿ, ಗದಗ : ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಿದ್ದ, ತಮ್ಮ ಹೃದಯದ ಬಾಗಿಲನ್ನು ಸರ್ವರಿಗೂ ಮುಕ್ತವಾಗಿರಿಸಿದ್ದ ಶ್ರೀಗಳ ಜಯಂತಿಯನ್ನು ಭಕ್ತರೆಲ್ಲ `ಭಾವೈಕ್ಯತೆಯ ದಿನ’ವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಸೂರ್ಯ-ಚಂದ್ರರಿರುವವರೆಗೆ ಅವರು ನಮಗೆಲ್ಲ ಭಾವೈಕ್ಯತೆಯ ಗುರುಗಳಾಗಿರುತ್ತಾರೆ ಎಂದು ಮುಂಡರಗಿ ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀಗಳು ನುಡಿದರು.
ಅವರು ಬುಧವಾರ ನಗರದ ತೋಂಟದಾರ್ಯ ಮಠದಲ್ಲಿ ಲಿಂ. ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ೭೫ನೇ ಜಯಂತಿ ಅಂಗವಾಗಿ ಜರುಗಿದ `ಭಾವೈಕ್ಯತಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪೂಜ್ಯರು ಭಾವೈಕ್ಯತೆಯ ಬಂಧುಗಳಾಗುವ ಜೊತೆಗೆ ವಿಶ್ವಬಂಧುಗಳಾಗಿದ್ದರು. ರಾಜ್ಯ ಸರ್ಕಾರವು ವಿಶ್ವಗುರು ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವ ಈ ಸಮಯದಲ್ಲಿ ಪೂಜ್ಯರು ಇದ್ದಿದ್ದರೆ ತುಂಬಾ ಸಂತಸಪಡುತ್ತಿದ್ದರು. ವೈಚಾರಿಕತೆ ಎಂದರೆ ಎಲ್ಲವನ್ನೂ ತೊರೆಯುವ ಸ್ವೇಚ್ಛಾಚಾರವಲ್ಲ, ವೈಚಾರಿಕತೆ ಹೇಗೆ ಮಾದರಿಯಾಗಿರಬೇಕು ಎನ್ನುವುದನ್ನು ಲಿಂಗೈಕ್ಯ ಗುರುಗಳ ಬದುಕಿನುದ್ದಕ್ಕೂ ಆಚರಿಸಿದ ಆಚರಣೆಗಳಿಂದ ತಿಳಿದುಕೊಳ್ಳಬೇಕು ಎಂದರು.
ತೋಂಟದ ಸಿದ್ಧಲಿಂಗ ಶ್ರೀಗಳ ಕುರಿತು ಪ್ರೊ. ಬಿ.ಆರ್ ಪೊಲೀಸ್‌ಪಾಟೀಲ ಬರೆದ `ಉರಿಯ ಗದ್ದುಗೆ’ ಕಾದಂಬರಿ ಹಾಗೂ ಭೋಜರಾಜ ಸೊಪ್ಪಿಮಠ ಸಂಪಾದಿಸಿದ `ಕರುಣಾಮಯಿ ಭಾಗ-೨’ ಗ್ರಂಥಗಳು ಲೋಕಾರ್ಪಣೆಗೊಂಡವು.
ಇತ್ತೀಚೆಗೆ ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಆಯ್ಕೆಯಾದ ಸಾಹಿತಿಗಳಾದ ಡಾ. ವೀರಣ್ಣ ರಾಜೂರ, ಡಾ. ಎನ್.ಜಿ. ಮಹಾದೇವಪ್ಪ ಅವರನ್ನು ಸಂಮಾನಿಸಲಾಯಿತು. ಸನ್ಮಾನೋತ್ತರವಾಗಿ ಡಾ.ವೀರಣ್ಣ ರಾಜೂರ ಮಾತನಾಡಿ, ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ನನ್ನದು ತಾಯಿ-ಮಗುವಿನ ಸಬಂಧವಿದ್ದ ಹಾಗೆ. ನಾನು ಶರಣ ಸಾಹಿತ್ಯದಲ್ಲಿ ಕೃಷಿ ಮಾಡಲು ಹಾಗೂ ನನಗೆ ಬಸವ ಪುರಸ್ಕಾರ ಸಿಗಲು ಲಿಂಗೈಕ್ಯ ಗುರುಗಳು ನೀಡಿದ ಪ್ರೇರಣೆ-ಪ್ರೋತ್ಸಾಹವೇ ಕಾರಣವಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಸನತ್‌ಕುಮಾರ ಬೆಳಗಲಿ ಮಾತನಾಡಿ, ಬಸವತತ್ವದ ಪ್ರಸಾರಕ್ಕೆ ನಿರಂತರವಾಗಿ ಮೀಸಲಾಗಿದ್ದ ಸಿದ್ಧಲಿಂಗ ಮಹಾಸ್ವಾಮಿಗಳು ಯಾವುದೇ ಒಂದು ಕೋಮಿಗೆ ಸೀಮಿತವಾದ ಶ್ರೀಗಳಾಗಿರಲಿಲ್ಲ. ಶ್ರೀಮಠದ ಜಾತ್ರಾ ಮಹೋತ್ಸವದಲ್ಲಿ ಅಲ್ಪಸಂಖ್ಯಾತರನ್ನು ಅಧ್ಯಕ್ಷರನ್ನಾಗಿಸಿದ ಶ್ರೀಗಳು, ಮಸೀದಿ ನಿರ್ಮಾಣಕ್ಕೆ ತಮ್ಮ ಮಠದ ಜಮೀನನ್ನು ದಾನವಾಗಿ ನೀಡಿರುವುದು ಮಾದರಿಯಾಗಿದೆ.
ಕಪ್ಪತಗುಡ್ಡವನ್ನು ಗಣಿಗಾರಿಕೆಯಿಂದ ರಕ್ಷಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶ್ರೀಗಳು ಮನುಷ್ಯರ ನಡುವಿನ ಗೋಡೆಗಳನ್ನು ಕೆಡವಿ ಮಾನವಬಂಧುತ್ವ ಬೆಳಸಿದ ಅಪರೂಪದ ಯತಿಗಳಾಗಿದ್ದರು ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ನ್ಯೂಜಿಲೆಂಡ್ ಬಸವಸಮಿತಿ ಸಂಸ್ಥಾಪಕರಾದ ಲಿಂಗಣ್ಣ ಕಲಬುರ್ಗಿ ಮಾತನಾಡಿದರು. ಭೈರನಹಟ್ಟಿ-ಶಿರೋಳ ಮಠದ ಶಾಂತಲಿAಗ ಮಹಾಸ್ವಾಮಿಗಳು, ಆಳಂದದ ಕೋರಣೇಶ್ವರ ಮಹಾಸ್ವಾಮಿಗಳು, ಕೋಲಶಾಂತೇಶ್ವರಮಠದ ಶಾಂತಲಿAಗ ದೇಶಿಕೇಂದ್ರ ಮಹಾಸ್ವಾಮಿಗಳು, ಮಹಾಂತಸ್ವಾಮಿಗಳು ಸೇರಿದಂತೆ ವಿವಿಧ ಹರ-ಗುರು-ಚರಮೂರ್ತಿಗಳು ಸಮ್ಮುಖ ವಹಿಸಿದ್ದರು.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಹಾಗೂ ಗುರುಬಸವ ಶಾಲೆಯ ವಿದ್ಯಾರ್ಥಿಗಳಿಂದ ವಚನನೃತ್ಯವೈಭವ ಜರುಗಿತು. ವಿವೇಕಾನಂದಗೌಡ ಪಾಟೀಲ ಹಾಗೂ ವೀರನಗೌಡ ಮರಿಗೌಡ್ರ ನಿರೂಪಿಸಿದರು.
ವೇದಿಕೆ ಮೇಲೆ ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಸಾಹಿತಿಗಳಾದ ಅಕ್ಬರ ಕಾಲಿಮಿರ್ಚಿ, ಶಶಿಧರ ತೋಡಕರ, ಜಾತ್ರಾ ಸಮಿತಿ ಅಧ್ಯಕ್ಷ ಡಾ. ಎಸ್.ಬಿ. ಶೆಟ್ಟರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ, ಬಿ.ವ್ಹಿ. ಶಿರೂರ, ಕೊಟ್ರೇಶ ಮೆಣಸಿನಕಾಯಿ ಇದ್ದರು.
ಪೂಜ್ಯರ ೭೫ನೇ ಜಯಂತಿ ಅಂಗವಾಗಿ ೭೫ ಮಕ್ಕಳು ಶ್ರೀಗಳ ರೂಪಕವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಎಲ್.ನಾರಾಯಣಸ್ವಾಮಿ, ಮೋಹನ ಆಲಮೇಲಕರ, ಶೇಖಣ್ಣ ಕವಳಿಕಾಯಿ, ಕೆ.ಎಸ್. ಚಟ್ಟಿ, ವಿದ್ಯಾಧರ ದೊಡ್ಡಮನಿ ಸೇರಿದಂತೆ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಹಸ್ರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಪೂಜ್ಯರ ಜಯಂತಿ ಅಂಗವಾಗಿ ಪ್ರತಿವರ್ಷದಂತೆ ಭೀಷ್ಮಕೆರೆಯ ಬಸವೇಶ್ವರ ಪುತ್ಥಳಿಯಿಂದ ಶ್ರೀಮಠದ ವರೆಗೆ `ಭಾವೈಕ್ಯತಾ ಯಾತ್ರೆ’ ಜರುಗಿತು. ಯಾತ್ರೆಯುದ್ದಕ್ಕೂ ಶ್ರೀಗಳ ನಾಲ್ಕು ಸಾವಿರಕ್ಕೂ ಅಧಿಕ ಅಭಿಮಾನಿಗಳು, ಬಸವಾಭಿಮಾನಿಗಳು ಹಾಗೂ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಸರ್ವ ಧರ್ಮಗಳನ್ನು ಪ್ರತಿನಿಧಿಸುವ ಧಾರ್ಮಿಕ ಮುಖಂಡರ ಭಿತ್ತಿಚಿತ್ರಗಳು ಜನಮನ ಸೆಳೆದವು. ಬಸವೇಶ್ವರ ಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮದ ಧಾರ್ಮಿಕ ಮುಖಂಡರ ರೂಪಕಗಳನ್ನು ಸಾದರಪಡಿಸಿದರು. ಯಾತ್ರೆಯು ಭಾವೈಕ್ಯತೆಯ-ಸಾಮರಸ್ಯದ ಸಂದೇಶವನ್ನು ಹೇಳುತ್ತಾ ಪ್ರತಿಧ್ವನಿಸಿತು.
ಲಿಂಗೈಕ್ಯ ಗುರುಗಳು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಜನ್ಮದಿನ ಆಚರಣೆ ಮಾಡಿಕೊಂಡವರಲ್ಲ. ಜೀವನದುದ್ದಕ್ಕೂ ಅವರು ಸಮಾಜದಲ್ಲಿ ಭಾವೈಕ್ಯತೆಯ ಅನುಷ್ಠಾನಕ್ಕಾಗಿ ಶ್ರಮಿಸಿದರು. ಆದ್ದರಿಂದ ಅವರು ಲಿಂಗೈಕ್ಯರಾದ ಬಳಿಕ ಅವರ ಅಭಿಮಾನಿಗಳೆಲ್ಲ ಸೇರಿಕೊಂಡು ಶ್ರೀಗಳ ಜನ್ಮದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸುತ್ತಾ ಬರುತ್ತಿದ್ದಾರೆ. ಸರ್ವ ಜನಾಂಗಗಳ ಅಭಿಮಾನಿಗಳು ಪ್ರತಿ ವರ್ಷ ಈ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಿಂಗೈಕ್ಯ ಗುರುಗಳನ್ನು ಸ್ಮರಿಸುತ್ತಾರೆ. ಭಾವೈಕ್ಯತೆ ಎಂಬುದು ಯಾರೊಬ್ಬರ ಸೊತ್ತಲ್ಲ, ಭಾವೈಕ್ಯತೆಯ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು.
– ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು.