ಕನ್ನಡವನ್ನು ಕಾಪಾಡುವುದು, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ: ಸಚಿವ ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ-3 ಯೋಜನೆ ಪೂರ್ಣಗೊಳಿಸಿ, 13-14 ಲಕ್ಷ ಎಕರೆ ಭೂಮಿಯನ್ನು ನೀರಾವರಿಗೊಳಿಸಿ ರೈತರ ಬದುಕನ್ನು ಹಸನಾಗಿಸಲು ರಾಜ್ಯ ಸರ್ಕಾರ ಸಂಕಲ್ಪ ಮಾಡಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

Advertisement

ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಜರುಗಿದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, 1 ಲಕ್ಷ 30 ಸಾವಿರ ಎಕರೆ ಭೂಮಿಯನ್ನು ರೈತರಿಂದ ಒಡಂಬಡಿಕೆ ಮೂಲಕ, ಒಂದು ಎಕರೆ ನೀರಾವರಿ ಭೂಮಿಗೆ 40 ಲಕ್ಷ ರೂಪಾಯಿ ಬೆಲೆ ನೀಡಲು ಸರ್ಕಾರ ನಿರ್ಣಯಗೊಳಿಸಿದೆ ಎಂದರು.

ಕನ್ನಡ ನಾಡಿನಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನದ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಸರಾಸರಿ 5 ಸಾವಿರ ರೂಪಾಯಿಗಳ ಆದಾಯ ಹೆಚ್ಚಿಸಿ ನಾಡಿನ ಬಡತನವನ್ನು ಬೇರು ಸಹಿತ ಕಿತ್ತೊಗೆಯಿದ್ದೇವೆ. ಕ್ರಾಂತಿಕಾರಕ ಈ ಯೋಜನೆಗಳು ನಮ್ಮ ಜಿಲ್ಲೆಯಲ್ಲಿ ಯಶಸ್ವಿಯಾಗಿ, ಶೇ. 99.50ರಷ್ಟು ಅರ್ಹ ಜನರಿಗೆ ತಲುಪಿವೆ ಎಂದರು.

ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ ಹಾಗೂ ಕನ್ನಡ ಸಾಹಿತ್ಯ ಪೋಷಕಿಯಾಗಿದ್ದ ದಾನಚಿಂತಾಮಣಿ ಅತ್ತಿಮಬ್ಬೆಯವರ ಸ್ಥಳವಾದ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪ್ರದೇಶವಾಗಿದ್ದು, ಗ್ರಾಮದಲ್ಲಿರುವ ಸ್ಮಾರಕಗಳು, ದೇವಾಲಯಗಳು, ಬಾವಿಗಳು, ಶಾಸನಗಳ ಸಂರಕ್ಷಣೆಗಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರದ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ಲಕ್ಕುಂಡಿ ಮತ್ತು ಇತರ ಸ್ಥಳಗಳಲ್ಲಿರುವ ಕಲ್ಯಾಣ ಚಾಲುಕ್ಯರ ಸ್ಮಾರಕ ಸಮೂಹವನ್ನು ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸಲು ನಾಮನಿರ್ದೇಶನ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಬಿಕದಕಟ್ಟೆಯಲ್ಲಿ 40 ಎಕರೆ ವಿಶಾಲ ಪ್ರದೇಶದಲ್ಲಿ ಮೃಗಾಲಯವನ್ನು ಆರಂಭಿಸಿ ಮತ್ತೆ 13 ಎಕರೆ ಪ್ರದೇಶ ಪಡೆದು ಅಂದಾಜು 12 ಕೋಟಿ ರೂ. ವೆಚ್ಚದಲ್ಲಿ ಮೃಗಾಲಯವನ್ನು ವಿಸ್ತರಿಸಿ ಅಭಿವೃದ್ಧಿಗೊಳಿಸಲಾಗುತ್ತಿದೆ. ನರಗುಂದ ಪಟ್ಟಣದಲ್ಲಿ 1 ಮೆಟ್ರಿಕ್ ಟನ್ ನಂತರ ಬಾಲಕರ ವಸತಿ ನಿಲಯ, ರೋಣ ಪಟ್ಟಣದಲ್ಲಿ 1 ಹೊಸ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಬಿಕದಕಟ್ಟೆ ಝೂದ ಬಳಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಆರ್ಚರಿ ಅಂಕಣ (ಬಿಲ್ಲು-ಬಾಣ ಕ್ರೀಡೆ) ಹಾಗೂ ಪಿಕಲ್ ಬಾಲ್ ಆಟಗಳ ಸೌಲಭ್ಯವನ್ನು ಸೃಷ್ಟಿಸಲಾಗಿದ್ದು, ಇದೇ 3ನೇ ತಾರೀಖಿನಂದು ಪ್ರಾರಂಭಿಸಲಾಗುವುದು. ರಾಜ್ಯದ ಪ್ರಗತಿಯ ಜೊತೆಗೆ ನಮ್ಮ ಕನ್ನಡ ಭಾಷೆ ಸಮೃದ್ಧವಾಗಿದೆಯೆಂದು ನಾವು ಕೈಕಟ್ಟಿ ಕುಳಿತುಕೊಳ್ಳಬಾರದು. ಇಂಗ್ಲಿಷ್ ಸೇರಿದಂತೆ ಕೆಲವು ಭಾಷೆಗಳ ಅತಿಯಾದ ದಾಳಿ ಕನ್ನಡದ ಮೇಲಾಗುತ್ತಿದೆ. ಕನ್ನಡ ಕಲಿಕೆಯ ಬಗ್ಗೆ ಯುವಜನತೆಯಲ್ಲಿ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ನಾವು, ಪಾಲಕರು ಮತ್ತು ಶಿಕ್ಷಕರು ಒಟ್ಟಾಗಿ ಪ್ರಯತ್ನಿಸಬೇಕು. ಕನ್ನಡವನ್ನು ಕಾಪಾಡುವುದು, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾ ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಎಸಿ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಘಂಟೆ ಕಲ್ಪನೆ ಬಹುಕಾಲದಿಂದಿದೆ. ಅದೇ ಮಾದರಿಯಲ್ಲಿ ಪ್ರಭುವಿನೆಡೆಗೆ ಪ್ರಭುತ್ವ ಎಂಬ ಯೋಜನೆಯ ವಿನೂತನ ಪ್ರಯೋಗವನ್ನು ಜಿಲ್ಲಾಡಳಿತದಿಂದ ಪ್ರಾರಂಭಿಸಲಾಗಿದೆ. ಈ ಪ್ರಯೋಗ ನಾಗರಿಕರು ತಮ್ಮ ದೂರನ್ನು ಆಡಳಿತಕ್ಕೆ ಕ್ಷಣಾರ್ಧದಲ್ಲಿಯೇ ತಲುಪಿಸುವ ಹಾಗೂ ನೀಡಿದ ದೂರು ಸಂಬಂಧಿಸಿದವರಿಗೆ ತ್ವರಿತವಾಗಿ ತಲುಪಿ ಪರಿಹಾರಕ್ಕೆ ದಾರಿ ಮಾಡುವ, ಆಡಳಿತ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೂ ಕಾರಣವಾಗಲಿರುವ ಈ ಪ್ರಯೋಗ ರಾಷ್ಟ್ರದಲ್ಲಿಯೇ ಪ್ರಥಮವಾಗಿದೆ”
ಎಚ್.ಕೆ. ಪಾಟೀಲ
ಜಿಲ್ಲಾ ಉಸ್ತುವಾರಿ ಸಚಿವರು

 

ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ಬಡವರು ಹಾಗೂ ಬಡ ಮಕ್ಕಳಿಗೂ ಅತ್ಯುತ್ತಮ ಸೌಲಭ್ಯ ನೀಡುವ ಗುರಿಯನ್ನು ಹೊಂದಿ ಇಂದಿರಾವನ ನಿರ್ಮಾಣ ಮಾಡಿ ಅದರಲ್ಲಿ ಸುಂದರವಾದ ಉದ್ಯಾನವನ, ಮಕ್ಕಳ ಮನೋರಂಜನೆಗಾಗಿ ಕ್ರೀಡಾ ಉಪಕರಣಗಳನ್ನು ಅಳವಡಿಸಿ ವಯೋವೃದ್ಧರಿಗೂ ವಿಶ್ರಾಂತಿಗಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಅತ್ಯುತ್ತಮ ಸೌಲಭ್ಯ ಕಲ್ಪಿಸಿದ್ದನ್ನು ಭೇಟಿಯ ವೇಳೆ ಮುಖ್ಯಮಂತ್ರಿಗಳು ಪ್ರಶಂಸೆ ವ್ಯಕ್ತಪಡಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.


Spread the love

LEAVE A REPLY

Please enter your comment!
Please enter your name here