ನವದೆಹಲಿ: ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯಲ್ಲಿ, ಇರಾನ್ ಮೇಲೆ ಅಮೆರಿಕಾ ದಾಳಿ ಮಾಡಲು ಭಾರತೀಯ ನೌಕಾನೆಲೆಗಳನ್ನು ಬಳಸುತ್ತಿದೆ ಎಂಬ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದು, ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಅಮೆರಿಕಾ ಮಾಜಿ ಸೇನಾ ಕರ್ನಲ್ ಡಗ್ಲಾಸ್ ಮ್ಯಾಕ್ಗ್ರೆಗೊರ್ ಒಎನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, “ಭಾರತದ ನೌಕಾನೆಲೆಗಳ ಬಳಕೆಯ ಮೂಲಕ ದಾಳಿ ನಡೆಯುತ್ತಿದೆ” ಎಂದು ಹೇಳಿದ್ದಾಗಿ ವೈರಲ್ ವಿಡಿಯೋಗಳು ತೋರಿಸುತ್ತಿವೆ.
ಈ ಸಂಬಂಧ ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದ್ದು, ʻನಕಲಿ ಸುದ್ದಿ ಎಚ್ಚರಿಕೆʼ ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಿ ವರದಿಗಳನ್ನ ತಳ್ಳಿಹಾಕಿದೆ.“ಭಾರತದ ನೌಕಾನೆಲೆಗಳು ಅಥವಾ ಬಂದರುಗಳನ್ನು ಅಮೆರಿಕಾ ಬಳಸಿ ದಾಳಿ ಮಾಡುವ ಪರಿಸ್ಥಿತಿ ಇರುವುದಿಲ್ಲ. ಇಂತಹ ಆಧಾರರಹಿತ ಮತ್ತು ತಪ್ಪು ಮಾಹಿತಿ ವಿರುದ್ಧ ಎಚ್ಚರಿಕೆಯಾಗಿರಿ” ಎಂದು ಸಾರ್ವಜನಿಕರಿಗೆ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ನಕಲಿ ವಿಡಿಯೋಗಳು ತಪ್ಪಾದ ಭಾವನೆ ಉಂಟುಮಾಡಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



