ಒಂದೇ ರಾಜ್ಯದವರಾದ ನಾವು ನೀರಿಗಾಗಿ ಕಿತ್ತಾಡುವುದು ಸರಿಯಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್!

0
Spread the love

ತುಮಕೂರು:- ಒಂದೇ ರಾಜ್ಯದವರಾದ ನಾವು ನೀರಿಗಾಗಿ ಕಿತ್ತಾಡುವುದು ಸರಿಯಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಗುಬ್ಬಿ ತಾಲ್ಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ₹50 ಕೋಟಿ ವೆಚ್ಚದ “ಮಠದ ಹಳ್ಳ” ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.”ನಾವು ಒಂದೇ ರಾಜ್ಯದವರು. ನೀರಿಗಾಗಿ ನಾವು ನಾವೇ ಕಿತ್ತಾಟ ನಡೆಸುವುದು ಬೇಡ. ಎಲ್ಲರಿಗೂ ಸರಿಯಾದ ರೀತಿಯಲ್ಲಿ ನೀರನ್ನು ನೀಡಲಾಗುವುದು. ನೆರೆ ರಾಜ್ಯದವರ ಜೊತೆ ತಿಕ್ಕಾಟ ನಡೆಸುವಂತೆ ನಾವು, ನಾವೇ ಕಿತ್ತಾಡುವುದು ಸರಿಯಲ್ಲ” ಎಂದರು.

Advertisement

“ಬೆಂಗಳೂರಿನಲ್ಲಿ ಕಾವೇರಿ ಆರತಿ ಮಾಡಿ ಪ್ರಾರ್ಥನೆ ಮಾಡಿದೆ. ಕಾವೇರಿ ತಾಯಿ ಕೃಪೆಯಿಂದ ಮುಂಗಾರು ಆರಂಭವಾಗುವ ಮುನ್ನವೇ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳು ಬಹುತೇಕ ತುಂಬಿವೆ. ಕಳೆದ ವರ್ಷ 30% ತುಂಬಿದ್ದ ಕೆಆರ್ ಎಸ್ ಈ ವರ್ಷ 89% ತುಂಬಿದೆ. ಕಳೆದ ವರ್ಷ 30% ತುಂಬಿದ್ದ ಹೇಮಾವತಿ 85% ತುಂಬಿದೆ. ಕಳೆದ ವರ್ಷ 40% ತುಂಬಿದ್ದ ಹಾರಂಗಿ ಈ ವರ್ಷ 70% ತುಂಬಿದೆ. 51% ತುಂಬಿದ್ದ ಕಬಿನಿ ಈ ವರ್ಷ 80% ತುಂಬಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

“ಬಹಳ ಸಂತೋಷದಿಂದ ಇಂದು ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದೇನೆ. ವಾಸು ಅವರ ಕ್ಷೇತ್ರ ಬೇರೆ ಅಲ್ಲ, ಡಿ.ಕೆ. ಶಿವಕುಮಾರ್ ಕ್ಷೇತ್ರ ಬೇರೆ ಅಲ್ಲ. ಇದು ನಮ್ಮ ಕ್ಷೇತ್ರ. ಯಾರು ಎಷ್ಟೇ ವಿರೋಧ ಮಾಡಲಿ, ಇಲ್ಲಿನ ರೈತರಿಗಾಗಿ ಏನು ಕೆಲಸ ಮಾಡಬೇಕೋ ನಾವು ಅದನ್ನು ಮಾಡುತ್ತೇವೆ. ಟಿ.ಬಿ ಜಯಚಂದ್ರ ಅವರಂತೆಯೇ ವಾಸು ಅವರೂ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ನೀವು ಆತಂಕಪಡುವ ಅಗತ್ಯವಿಲ್ಲ” ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here