ಬೆಳಗಾವಿ: ಕಳಂಕಿತ ಮುಖ್ಯಮಂತ್ರಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಮೇಲೆ ಆರೋಪ ಬಂದಾಗ ಸ್ಪಷ್ಟವಾಗಿ ನಿರಾಕರಣೆ ಮಾಡಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ಮೇಲೆ ಕಾಂಗ್ರೆಸ್‌ನ ಎಲ್ಲಾ ಮುಖಂಡರು ಅವಹೇಳನಕಾರಿಯಾಗಿ ಮಾತನಾಡಿದ್ದರು.
ನ್ಯಾಯಾಲಯಕ್ಕೆ ಮೇಲ್ನೋಟಕ್ಕೆ ಹಗರಣ ಆಗಿದೆ ಎಂದು ಗೊತ್ತಾದ ಮೇಲೆ ತನಿಖೆಗೆ ಅನುಮತಿ ನೀಡಿದೆ. ಸಿದ್ದರಾಮಯ್ಯನವರು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಳಂಕಿತ ಮುಖ್ಯಮಂತ್ರಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದು ಸರಿಯಲ್ಲ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಗೃಹಲಕ್ಷ್ಮಿ ಹಣ ಬರೋದು ತಪ್ಪಿದೆ. ಮತ್ತೆ ಲೂಟಿ ಮಾಡುವ ಕೆಲಸ ಶುರುವಾಗಿದೆ. ವಾಲ್ಮೀಕಿ ಹಗರಣದ ಹಣ ಚುನಾವಣೆಗೆ ಬಳಸಿಕೊಂಡಿದ್ದಾರೆಂದು ಇಡಿ ಸ್ಪಷ್ಟವಾಗಿ ಉಲ್ಲೇಖ ಮಾಡಿದೆ. ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಹರಿಹಾಯ್ದರು.