ಬೆಂಗಳೂರು:- ಸತ್ಯ ಬಿಚ್ಚಿಟ್ಟ ರಾಜಣ್ಣ ಅವರ ರಾಜೀನಾಮೆ ಪಡೆದದ್ದು ಸರಿಯಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಚಿವ ರಾಜಣ್ಣ ಅವರ ರಾಜೀನಾಮೆ ಪಡೆಯುವ ಮೂಲಕ ರಾಹುಲ್ ಗಾಂಧಿಯವರ ಮತ್ತು ದಲಿತರ ಬಗ್ಗೆ ಮೊಸಳೆಕಣ್ಣೀರು ಸುರಿಸುವ ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬಯಲಾಗಿದೆ.
ಚುನಾವಣಾ ಆಯೋಗದ ಷಡ್ಯಂತ್ರ, ಆಯೋಗದ ದುರುಪಯೋಗದ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ, ನರೇಂದ್ರ ಮೋದಿಯವರು ಪ್ರಧಾನಿಗಳಾಗಿದ್ದಾರೆ ಎಂಬ ಧಾಟಿಯಲ್ಲಿ ರಾಹುಲ್ ಗಾಂಧಿಯವರು ಆರೋಪಿಸಿದ್ದರು. ಬಿಜೆಪಿಯಿಂದ ನಾವು ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದೆವು. ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ದೇಶದ ಜನರ ವಿಶ್ವಾಸ ಪಡೆದುಕೊಳ್ಳುವಲ್ಲಿ ವಿಫಲವಾದ ರಾಹುಲ್ ಗಾಂಧಿಯವರು ಈ ಆರೋಪ ಮಾಡಿದ್ದು ಇದರಲ್ಲಿ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾಗಿ ಗಮನ ಸೆಳೆದರು.
ಸಿದ್ದರಾಮಯ್ಯನವರ ಸಂಪುಟದ ಹಿರಿಯ ಸಚಿವ, ಸಿಎಂ ಆಪ್ತರಾದ ರಾಜಣ್ಣನವರು ರಾಹುಲ್ ಗಾಂಧಿಯವರ ಚುನಾವಣಾ ಆಯೋಗದ ಮೇಲಿನ ಆರೋಪ ಸರಿಯಲ್ಲ; ಕಾಂಗ್ರೆಸ್ ಸರಕಾರ ಇದ್ದಾಗಲೇ ಇವೆಲ್ಲ ಅವ್ಯವಹಾರ ನಡೆದಿವೆ ಎಂಬಂತೆ ಮಾತನಾಡಿದ್ದರು. ಸತ್ಯ ಸಹಿಸಲಾಗದ ಕಾಂಗ್ರೆಸ್ ಹೈಕಮಾಂಡ್, ರಾಹುಲ್ ಗಾಂಧಿಯವರು ಪರಿಶಿಷ್ಟ ಪಂಗಡಕ್ಕೆ ಸೇರಿದ ಹಿರಿಯ ಸಚಿವ ರಾಜಣ್ಣ ಅವರ ರಾಜೀನಾಮೆಯನ್ನು ಬೇಷರತ್ತಾಗಿ ಪಡೆದಿದೆ; ಇದು ಖಂಡಿತ ಸರಿಯಲ್ಲ ಎಂದು ಟೀಕಿಸಿದರು.