ವಿಜಯಸಾಕ್ಷಿ ಸುದ್ದಿ, ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಪ್ರೊ. ಎ.ಎಂ. ಖಾನ್ ಅವರನ್ನು ಕುಲಪತಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಅವರು ಅಧಿಕಾರ ಸ್ವೀಕರಿಸಿದ ನಂತರ ಈ ನೇಮಕ ಪ್ರಶ್ನಿಸಿ ಡಾ. ಮಹದೇವಪ್ಪ ಕರಿದುರಗನವರ್ ಹೈಕೋರ್ಟ್ ಮೆಟ್ಟಿಲೇರಿದ್ದು, ನೇಮಕಾತಿಗೆ ತಡೆಯಾಜ್ಞೆಯನ್ನು ತಂದಿರುವುದು ಸಮಂಜಸವಲ್ಲ ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡ ನಗರದಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಜಿಲ್ಲಾ ಉಸ್ತುವಾರಿಗಳ ಕಚೇರಿಯಲ್ಲಿ ಅವರು ಮಾತನಾಡುತ್ತಾ, ಡಾ. ಮಹದೇವಪ್ಪ ಕರಿದುರಗನವರ್ ಹೈಕೋರ್ಟಿಗೆ ಹೋಗಿರುವುದು ಅವರ ವೈಯಕ್ತಿಕ ವಿಚಾರ. ಆದರೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಆ ಸಮುದಾಯದ ವ್ಯಕ್ತಿಯನ್ನು ಕುಲಪತಿಯಾಗಿ ನೇಮಿಸಿರುವುದನ್ನು ಪ್ರಶ್ನಿಸುವ ಅಧಿಕಾರ ಅವರಿಗಿಲ್ಲ ಎಂದರು.
ಈಗಾಗಲೇ ರಾಜ್ಯದ ಇತರೆ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇದ್ದ ಕುಲಪತಿ ಸ್ಥಾನಕ್ಕೆ ಬೇರೆ ಸಮುದಾಯಗಳ, ಜೊತೆಗೆ ದಲಿತ ಸಮುದಾಯಕ್ಕೆ ಸೇರಿದವರನ್ನೂ ಕುಲಪತಿಯಾಗಿ ನೇಮಿಸಿದ್ದಾರೆ. ಬೇರೆ ಯಾರನ್ನೂ ಪ್ರಶ್ನಿಸದೆ ಕೇವಲ ಅಲ್ಪಸಂಖ್ಯಾತ ವ್ಯಕ್ತಿಗೆ ನೀಡಿದ ಕುಲಪತಿ ಸ್ಥಾನವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಹೋಗಿರುವುದು ಅನುಮಾನ ಮೂಡುತ್ತದೆ. ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಸಹೋದರರಂತೆ ಬದುಕುತ್ತಿದ್ದಾರೆ. ಈ ಸಾಮರಸ್ಯವನ್ನು ಕೆಡಿಸುವ ಪ್ರಯತ್ನ ಆಗಬಾರದು ಎಂದರು.
ಈ ಸಂದರ್ಭದಲ್ಲಿ ಧಾರವಾಡ ಉಸ್ತುವಾರಿ ಜಾಫರ್ ಡಾಲಾಯತ್, ಮುನ್ನಾ ಕಲ್ಮನಿ, ರಹೀಮ್‌ಸಾಬ್ ದೊಡ್ಡಮನಿ, ಸಲೀಂ ನರಗುಂದ, ಮುಜಮ್ಮಿಲ್ ಬಳ್ಳಾರಿ, ಇಲಿಯಾಸ್ ಶಿರಹಟ್ಟಿ, ಹನೀಫ್ ಇರಕಲ್, ಎಸ್.ಎಸ್. ಖಾದ್ರಿ, ಇಸಾಕ್ ಇರಕಲ್ ಮುಂತಾದವರಿದ್ದರು.