ವಿಜಯಸಾಕ್ಷಿ ಸುದ್ದಿ, ಗದಗ: ಒಂದು ಸಮಾಜದ ಅಭಿವೃದ್ಧಿಯನ್ನು ಅದರ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟದಿಂದ ಅಳೆಯಲಾಗುತ್ತದೆ. ಇತ್ತೀಚೆಗೆ ಸರ್ಕಾರ ಕೈಗೊಂಡಿರುವ ಹಲವು ಯೋಜನೆಗಳು ಈ ಎರಡೂ ಕ್ಷೇತ್ರಗಳಲ್ಲಿ ಚೈತನ್ಯ ತುಂಬುವಂತಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ರವಿವಾರ ಗದಗ ತಾಲೂಕಿನ ಕಬಲಾಯತಕಟ್ಟಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಹಾಗೂ ದುರ್ಗಾದೇವಿ ಸಮುದಾಯ ಭವನದ ಉದ್ಘಾಟನೆ ಮತ್ತು ಸಿ.ಸಿ. ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.
ನಾವು ಮಾಡುವ ಅಭಿವೃದ್ಧಿ ಕಾಮಗಾರಿಗಳಾಗಲಿ ಅಥವಾ ನೀಡುವ ಶಿಕ್ಷಣವಾಗಿರಲಿ ಅದು ಉನ್ನತ ಗುಣಮಟ್ಟದ್ದಾಗಿರಬೇಕು ಆಗ ಮಾತ್ರ ಅದರಿಂದ ಸಮಾಜಕ್ಕೆ ಉತ್ತಮ ಪ್ರತಿಫಲ ಲಭ್ಯವಾಗಲಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ಅದರಿಂದ ಪ್ರತಿಫಲ ಅಪೇಕ್ಷೆ ಖಂಡಿತ ಸಿಗಲಾರದು. ಆದುದರಿಂದಲೇ ಎಲ್ಲರೂ ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ರಸ್ತೆ, ಕುಡಿಯುವ ನೀರು, ಆರೋಗ್ಯ ಕೇಂದ್ರ, ವಿದ್ಯುತ್ ಮತ್ತು ವಸತಿ ಗೃಹಗಳ ಕಾಮಗಾರಿಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನಜೀವನ ಸುಲಭವಾಗಲು, ಗ್ರಾಮ-ನಗರಗಳ ನಡುವಿನ ಅಂತರ ಕಡಿಮೆಯಾಗಲು ಇದು ಸಹಾಯಕವಾಗಲಿದೆ ಎಂದು ಹೇಳಿದರು.
ಕಬಲಾಯತಕಟ್ಟಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜು 14 ಲಕ್ಷ ರೂ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ ಮಾಡಲಾಗಿದೆ. ಇಲ್ಲಿಂದಲೇ ದೇಶದ ಭವಿಷ್ಯ ನಿರ್ಮಾಣ ಮಾಡುವ ಮಕ್ಕಳು ಹೊರಹೊಮ್ಮಲಿ. ಉತ್ತಮವಾದ ಸೌಲಭ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳಾದ ನಮ್ಮ ಜವಾಬ್ದಾರಿ, ಅವರಿಗೆ ಉತ್ತಮ ಶಿಕ್ಷಣ ಸರಿಯಾಗಿ ನೀಡುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ. ಅದನ್ನು ಶಿಕ್ಷಕರು ಶ್ರದ್ಧೆಯಿಂದ ನಿರ್ವಹಿಸಬೇಕು ಎಂದರು.
ಇದೇ ವೇಳೆ ಕಬಲಾಯತಕಟ್ಟಿಯ ದುರ್ಗಾದೇವಿ ದೇವಸ್ಥಾನ ಸಮಿತಿಯಿಂದ ಸಚಿವ ಎಚ್.ಕೆ. ಪಾಟೀಲರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಿದ್ದು ಪಾಟೀಲ, ಅಶೋಕ ಮಂದಾಲಿ, ಮಲ್ಲಯ್ಯ ಕೆ ಸೇರಿದಂತೆ ಗ್ರಾಮದ ಜನಪ್ರತಿನಿಧಿಗಳು, ಗಣ್ಯರು ಹಾಜರಿದ್ದರು.
ಬಾಕ್ಸ್
ಸಮಾಜದ ಪ್ರಗತಿಗೆ ಒಟ್ಟಾರೆ ಸಮರ್ಪಕ ಕಾಮಗಾರಿ ಮತ್ತು ಗುಣಮಟ್ಟದ ಶಿಕ್ಷಣ ಇವೆರಡೂ ಸಮಾಜವನ್ನು ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಮುನ್ನಡೆಸುವ ಬಲವಾದ ಆಧಾರಗಳು. ಮೂಲಭೂತ ಸೌಕರ್ಯ ಒದಗಿದಾಗ ಜನಜೀವನ ಸುಲಭವಾಗುತ್ತದೆ. ಉತ್ತಮ ಶಿಕ್ಷಣ ದೊರೆತಾಗ ಮುಂದಿನ ಪೀಳಿಗೆಯ ಭವಿಷ್ಯ ಭದ್ರವಾಗುತ್ತದೆ ಎಂದು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.