ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಫೆ. 20ರಂದು ನಿಡಗುಂದಿಕೊಪ್ಪದಲ್ಲಿ ಪೂಜ್ಯ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಏರ್ಪಡಿಸಲು ಉದ್ದೇಶಿಸಿರುವ ಗಜೇಂದ್ರಗಡ ಪ್ರಥಮ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಜಿ.ಎಸ್. ಪಾಟೀಲ ಘೋಷಿಸಿದರು.
ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಮಠದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇವಲ ಹದಿನೈದು ದಿನಗಳ ಹಿಂದೆ ಜಿಲ್ಲಾ ಸಮ್ಮೇಳನವನ್ನು ಜರುಗಿಸಿ ಯಶಸ್ವಿಗೊಳಿಸಿದ್ದೇವೆ. ಪೂಜ್ಯರ ಆಸೆಯಂತೆ ತಾಲೂಕಾ ಸಮ್ಮೇಳನ ನಡೆಸಲು ಪುನಃ ಜಿಲ್ಲಾ ಕಸಾಪ ಘಟಕ ಮತ್ತು ತಾಲೂಕು ಘಟಕಗಳು ಸಜ್ಜಾಗಿರುವುದು ವಿಶೇಷ ಆನಂದವನ್ನುಂಟು ಮಾಡಿದೆ. ಈ ಮೂಲಕ ತಾಲೂಕಿನಲ್ಲಿ ಕನ್ನಡದ ಕಂಪು ಹರಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಆದ್ಯಾತ್ಮಿಕ ಜಾತ್ರೆಯ ಜೊತೆಗೆ ಅಕ್ಷರ ಜಾತ್ರೆಯನ್ನು ನೆರವೇರಿಸಲು ಮುಂದಾಗಿರುವ ಶ್ರೀಗಳ ನಿರ್ಧಾರ ಸ್ವಾಗತಾರ್ಹ. ಜಾತ್ರೆಯನ್ನು ಈ ರೀತಿ ವಿಶೇಷ ವಿಧಾಯಕ ಕಾರ್ಯಕ್ರಮಗಳ ಮೂಲಕ ಆಚರಿಸಿದರೆ ಅದಕ್ಕೊಂದು ಔಚಿತ್ಯತೆ ಬರುತ್ತದೆ. ಎಲ್ಲ ಸ್ವಾಮೀಜಿಗಳೂ ಇಂತಹ ಕಾರ್ಯಕ್ಕೆ ಮುಂದಾಗಬೇಕೆಂದು ಹೇಳಿದ ಪಾಟೀಲ, ತಾಲೂಕಾ ಸಮ್ಮೇಳನಕ್ಕೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಮೂಲ ಪೀಠಾಧ್ಯಕ್ಷರಾದ ಚನ್ನಬಸವ ಮಹಾಸ್ವಾಮಿಗಳಿಗೆ ಮತ್ತು ಹಿಂದಿನ ಪೀಠಾಧಿಪತಿಗಳಾದ ಶಿವಬಸವ ಮಹಾಸ್ವಾಮಿಗಳವರಿಗೆ ಇಲ್ಲಿ ಅಕ್ಷರ ಜಾತ್ರೆ ನಡೆಯಬೇಕೆಂಬ ಆಸೆಯಾಗಿದೆ. ಅದನ್ನು ಈಗಿನ ಶ್ರೀಗಳ ಮೂಲಕ ಈಡೇರಿಸಲು ಅವರು ಮುಂದಾಗಿರುವುದು ಸಂತಸಕರ ಎಂದರು.
ಸಾಹಿತಿ ಎಸ್.ಎಫ್. ಕರಿದುರಗನವರ ಮಾತನಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರಿಗೂ ಸಮನಾದ ಅವಕಾಶ ನೀಡಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸೋಣ. ಯಾರಿಗೂ ಅಸಮಾಧಾನವಾಗದಂತೆ ಪ್ರಥಮ ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ ಎಂದರು.
ಆಶೀರ್ವಚನ ನೀಡಿದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು, ನಮ್ಮ ಹಿರಿಯ ಗುರುಗಳ ಅಣತಿಯಂತೆ ಸಮ್ಮೇಳನ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಜೊತೆಗೆ ಸಹಾಯವೂ ಬೇಕು. ನಮ್ಮೊಂದಿಗೆ ಶಾಸಕರಿರುವುದು ನಮಗೆ ಇನ್ನಿಲ್ಲದ ಬಲವನ್ನು ತುಂಬಿದೆ ಎಂದು ತಿಳಿಸಿದರು.
ವೇದಿಕೆಯ ಮೇಲೆ ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ, ಹೋಬಳಿ ಅಧ್ಯಕ್ಷ ಎಂ.ವಿ. ವೀರಾಪೂರ, ವೀರಣ್ಣ ಶೆಟ್ಟರ, ವಿ.ಬಿ. ಸೋಮನಕಟ್ಟಿಮಠ, ಡಾ. ಕೆ.ಬಿ. ಧನ್ನೂರ, ಕಿಶೋರಬಾಬು ನಾಗರಕಟ್ಟಿ, ಶರಣಪ್ಪ ಬೆಟಗೇರಿ, ಎಸ್.ಎಸ್. ಪಸಾರದ, ಎಂ.ಎ. ಹಾದಿಮನಿ, ಮಂಉಳಾ ರೇವಡಿ, ಅಂದಪ್ಪ ಬಿಚ್ಚೂರ ಮುಂತಾದವರಿದ್ದರು. ಶಿಕ್ಷಕ ಡಿ.ಎಸ್. ಬಡಿಗೇರ ಸ್ವಾಗತಿಸಿ ನಿರೂಪಿಸಿದರು.
ಈ ಮಠವು ಲೌಕಿಕದ ಭವರೋಗವನ್ನು ಕಳೆಯುವದರ ಜೊತೆಗೆ ಈಗ ಅಕ್ಷರದ ಸೇವೆಯನ್ನೂ ಮಾಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ. ಶ್ರೀ ಕುಮಾರೇಶ್ವರರ ಜಾತ್ರಾ ಮಹೋತ್ಸವವನ್ನು ನೆಪವಾಗಿಟ್ಟುಕೊಂಡು ಪ್ರಪ್ರಥಮ ತಾಲೂಕಾ ಸಮ್ಮೇಳನ ನಡೆಸಲು ಮುಂದಾಗಿರುವ ಪೂಜ್ಯ ಅಭಿನವ ಚನ್ನಬಸವ ಮಹಾಸ್ವಾಮಿಗಳ ದೃಢ ನಿರ್ಧಾರಕ್ಕೆ ನಾವೆಲ್ಲರೂ ತಲೆ ಬಾಗಿದ್ದೇವೆ ಎಂದು ಶಾಸಕ ಜಿ.ಎಸ್. ಪಾಟೀಲ ನುಡಿದರು.