HomeGadag Newsಕಾಲಮಿತಿಯೊಳಗೆ ಸೇವೆ ಒದಗಿಸುವುದು ನಮ್ಮ ಹೊಣೆ

ಕಾಲಮಿತಿಯೊಳಗೆ ಸೇವೆ ಒದಗಿಸುವುದು ನಮ್ಮ ಹೊಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರಿಗೆ ಸರ್ಕಾರದ ಎಲ್ಲ ಸೇವೆಗಳು ನಿಗದಿತ ಅವಧಿಯಲ್ಲಿ ತಲುಪುವಂತೆ ಮಾಡುವ ಉದ್ದೇಶದಿಂದ ಜಾರಿಗೊಳಿಸಿರುವ ಸಕಾಲ ಯೋಜನೆಯ ಅನುಷ್ಠಾನದಲ್ಲಿ ಇನ್ನಷ್ಟು ಕಾರ್ಯಕ್ಷಮತೆ ತರಲು ಹಾಗೂ ಗಡುವು ಮೀರುವ ಅರ್ಜಿಗಳ ನಿವಾರಣೆಗಾಗಿ ಇಲಾಖಾ ಅಧಿಕಾರಿಗಳು ಗಮನ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಸೂಚಿಸಿದರು.

ಬುಧವಾರ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾರ್ವಜನಿಕರು ಸಕಾಲ ಮೂಲಕ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಕಾಲಮಿತಿಯೊಳಗೆ ಸೇವೆ ಒದಗಿಸುವುದು ನಮ್ಮ ಹೊಣೆಗಾರಿಕೆ. ಯಾವುದೇ ಇಲಾಖೆಯಲ್ಲೂ ವಿನಾಕಾರಣ ವಿಳಂಬಕ್ಕೆ ಆಸ್ಪದ ನೀಡಬೇಡಿ. ಕಾಲಮಿತಿ ಮೀರಿ ಉಳಿದಿರುವ ಅರ್ಜಿಗಳನ್ನು ತಕ್ಷಣ ನಿಯಮಾನುಸಾರ ವಿಲೇವಾರಿಗೊಳಿಸಿ ಎಂದು ತಿಳಿಸಿದರು.

ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಬೇಕೆನ್ನುವ ಒತ್ತಡದಿಂದಾಗಿ ಅನಗತ್ಯ ಅರ್ಜಿಗಳ ತಿರಸ್ಕಾರ ಮಾಡಬೇಡಿ. ನಿಯಮಾನುಸಾರ ಅರ್ಜಿ ತಿರಸ್ಕಾರ ಮಾಡಲು ಕ್ರಮ ವಹಿಸಬೇಕು. ತಪ್ಪಿದಲ್ಲಿ ಇಲಾಖಾಧಿಕಾರಿಗಳು ಶಿಕ್ಷೆ, ದಂಡ ಹಾಗೂ ಇಲಾಖಾ ವಿಚಾರಣೆಗೆ ಒಳಪಡಬೇಕಾದೀತು ಎಂದು ಎಚ್ಚರಿಸಿದರು.

ಸಕಾಲ ಯೋಜನೆ ಕುರಿತು ಇಲಾಖಾ ಮುಖ್ಯಸ್ಥರು ಸರಿಯಾಗಿ ತಿಳುವಳಿಕೆ ಹೊಂದಬೇಕು. ಸಕಾಲ ಯೋಜನೆಯನ್ನು 2011ರಿಂದ ಆರಂಭಗೊಳಿಸಲಾಗಿದೆ. ಪ್ರಸ್ತುತ 1173 ಸೇವೆಗಳನ್ನು ಸಕಾಲ ಯೋಜನೆಯಡಿ ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸುವವರು ಗ್ರಾಮ ಒನ್, ಕರ್ನಾಟಕ ಒನ್, ನಾಡಕಚೇರಿ, ಸಿಎಸ್‌ಸಿ ಸೆಂಟರ್ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಅವರು ಸಲ್ಲಿಸಿದ ಅರ್ಜಿಗಳು ಸರಿಯಿದ್ದಲ್ಲಿ ಶೀಘ್ರ ವಿಲೇವಾರಿ ಮಾಡುವ ಮೂಲಕ ಸಕಾಲ ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸೋಣ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸಕಾಲ ಯೋಜನೆಯಡಿ ಸಾಧಿಸಿದ ಪ್ರಗತಿ ಅಂಕಿ ಅಂಶಗಳನ್ನು ಹಾಗೂ ವಿಳಂಬ ವಿಲೇವಾರಿ ಮಾಡಿದ ಕುರಿತಂತೆ ತಾಂತ್ರಿಕ ತೊಂದರೆಗಳ ಕುರಿತು ಸಭೆಯ ಗಮನಕ್ಕೆ ತಂದರು. ಜೊತೆಗೆ ಮುಂದಿನ ಹಂತದಲ್ಲಿ ಕಾಲಮಿತಿಯಲ್ಲಿಯೇ ಅರ್ಜಿ ವಿಲೇವಾರಿ ಮಾಡಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ಡಿಡಿಪಿಐ ಆರ್.ಎಸ್. ಬುರುಡಿ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ, ಡಿಡಿಎಲ್‌ಆರ್ ರುದ್ರಣ್ಣಗೌಡ ಜಿ.ಜೆ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ ಬಿದರಿ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಸಕಾಲ ಪ್ರಗತಿಯಲ್ಲಿ ರಾಜ್ಯದಲ್ಲಿ ಗದಗ ಜಿಲ್ಲೆ 8ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಜುಲೈ 2025ರ ಅಂತ್ಯದವರೆಗೆ ಸಕಾಲ ಯೋಜನೆಯಡಿ 67154 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 68305 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, 5873 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 1039 ಅರ್ಜಿಗಳನ್ನು ಕಾಲಮಿತಿ ನಂತರ ಹಾಗೂ 67266 ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಆಗಸ್ಟ್ ಮಾಹೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 1157 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 251 ಅರ್ಜಿಗಳನ್ನು ಗಡುವು ಮೀರಿದ ನಂತರ ವಿಲೇವಾರಿಗೊಳಿಸಲಾಗಿದೆ.

“ಸಕಾಲ ಯೋಜನೆಯಡಿ ಹಲವು ಯೋಜನೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಕುರಿತಂತೆ ಮೊದಲು ಅರಿತುಕೊಂಡು ನಂತರ ಸಕಾಲದಲ್ಲಿಯೇ ಅರ್ಜಿ ಸ್ವೀಕರಿಸಿ ಸೇವೆ ಒದಗಿಸಬೇಕು. ಝೀರೋ ರಿಸಿಪ್ಟ್ ಇರುವಂತಹ ಇಲಾಖೆಯ ಯೋಜನೆಗಳ ಕುರಿತು ಮುಖ್ಯಸ್ಥರು ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡುವ ಮೂಲಕ ಸಕಾಲದಲ್ಲಿಯೇ ಅರ್ಜಿ ಸ್ವೀಕರಿಸಿ ಪರಿಹಾರ ನೀಡಬೇಕು”

– ಡಾ. ದುರಗೇಶ್ ಕೆ.ಆರ್.

ಅಪರ ಜಿಲ್ಲಾಧಿಕಾರಿಗಳು, ಗದಗ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!