ವಿಜಯಸಾಕ್ಷಿ ಸುದ್ದಿ, ಗದಗ: ಪ್ರಾಚೀನ ಕಾಲದಿಂದಲೂ ಭಾರತೀಯರು ತಾತ್ವಿಕ ಚಿಂತನೆಗೆ ಹೆಸರಾಗಿದ್ದು, ತಾತ್ವಿಕ ಚಿಂತನೆಯಿಂದ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಕಳೆದ ಎರಡು ವಾರಗಳಿಂದ ಇಲ್ಲಿ ಡಾ. ಪಾವಗಡ ಪ್ರಕಾಶ್ ರಾವ್ ಅವರು ಅತ್ಯಂತ ಅರ್ಥಪೂರ್ಣವಾಗಿ ಭಗವದ್ಗೀತಾ ಪ್ರವಚನ ನಡೆಸಿಕೊಟ್ಟಿದ್ದು, ಕೇಳುಗರು ಪ್ರವಚನದಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಗವದ್ಗೀತೆಯು ಅತ್ಯಂತ ವಿಶಿಷ್ಟವಾದ ಗ್ರಂಥವಾಗಿದ್ದು, ನೂರಾರು ಜನರು ಭಗವದ್ಗೀತೆಗೆ ವ್ಯಾಖ್ಯಾನ ಬರೆದಿದ್ದಾರೆ. ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣ ಮತ್ತು ಅರ್ಜುನರ ನಡುವಿನ ಸಂವಾದೋಪಾದಿ ಸಂಭಾಷಣೆಯಲ್ಲಿ ಕೃಷ್ಣ ಅರ್ಜುನನ ಪ್ರಶ್ನೆಗಳಿಗೆ ಉತ್ತರ ನೀಡಿದ್ದರೂ ಸಹ ಅವು ಜನರಲ್ಲಿ ಮೂಡುವ ಗೊಂದಲಗಳೇ ಆಗಿವೆ. ಅತ್ಯಂತ ನಿಷ್ಕಲ್ಮಶವಾದ ಪ್ರೀತಿಯೇ ಭಕ್ತಿಯಾಗಿದ್ದು, ಪ್ರವಚನದಂಥ ಅನುಭಾವದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿನ ಮೈಲಿಗೆ ಕಳೆದುಕೊಳ್ಳಬಹುದು ಎಂದರು.
ಪ್ರವಚನ ಮಾಲಿಕೆಯ ಕೊನೆಯ ದಿನದ ಪ್ರವಚನ ನೀಡಿದ ಡಾ.ಪಾವಗಡ ಪ್ರಕಾಶ್ ರಾವ್ ಮಾತನಾಡಿ, ಭಗವದ್ಗೀತೆಯ ಕುರಿತ ತಾತ್ವಿಕ ಚಿಂತನೆ ಅರ್ಥಮಾಡಿಕೊಳ್ಳಲು ಕಷ್ಟ. ಆದಾಗ್ಯೂ ಪ್ರವಚನಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಉಪನಿಷತ್ತುಗಳಲ್ಲಿ ಬೃಹ್ಮನ್ ಎಂಬ ಮಹಾನ್ ಪರಿಕಲ್ಪನೆಯ ವಿವರಣೆ ಇದ್ದು, ಬ್ರಹ್ಮನ್ ಎಂದರೆ ಇಡೀ ಬ್ರಹ್ಮಾಂಡವನ್ನೇ ವ್ಯಾಪಿಸಿರುವ ನಿರಾಡಂಬರ ತತ್ವ. ನದಿಗಳು ನೂರಾರಿದ್ದರೂ ಜಲ ಒಂದೇ. ಅದೇ ರೀತಿ ಕೋಟ್ಯಂತರ ಆತ್ಮಗಳು ಇದ್ದರೂ ಅವೆಲ್ಲ `ಬ್ರಹ್ಮನ್’ ಶಕ್ತಿಯ ಕಿರಣಗಳಾಗಿವೆ.
ಚಿನ್ನದ ಗಟ್ಟಿಯಿಂದ ನೂರಾರು ಆಭರಣಗಳನ್ನು ತಯಾರಿಸುತ್ತೇವೆ. ಅದೇ ರೀತಿ ಪರಮಾನಂದ ಪರಬ್ರಹ್ಮ ಸ್ವರೂಪವನ್ನು ನಾವು ಶಿವ, ಶಂಕರ, ವಿಷ್ಣು, ರಾಮ ಹೀಗೆ ದೇವತೆಗಳ ಹೆಸರಿನಿಂದ ಆರಾಧನೆ ಮಾಡುತ್ತೇವೆ. ಈ ಪ್ರವಚನ ಮಾಲಿಕೆಯಲ್ಲಿ ಭಗವದ್ಗೀತೆಯ ಪೀಠಿಕೆ ಕುರಿತು ವಿವರಣೆ ನೀಡಿದ್ದು, ಮುಂದಿನ ದಿನಗಳಲ್ಲಿ ಸಂಚಾಲನಾ ಸಮಿತಿಯವರು ಮತ್ತೊಮ್ಮೆ ಪ್ರವಚನ ಏರ್ಪಡಿಸಿದರೆ ಭಗವದ್ಗೀತೆಯ ಸಂಪೂರ್ಣ ದರ್ಶನ ಮಾಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಪ್ರವಚನದ ಯಶಸ್ಸಿಗೆ ಸಹಕರಿಸಿದವರನ್ನು ಸಂಮಾನಿಸಲಾಯಿತು. ಪ್ರವಚನ ಸಂಚಾಲನ ಸಮಿತಿ ಅಧ್ಯಕ್ಷರಾದ ಎಸ್.ಎಸ್. ಶೆಟ್ಟರ್ ಮಾತನಾಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.