ಬೆಂಗಳೂರು:– SC-ST ಸೈಟುಗಳನ್ನು ಸಿದ್ದರಾಮಯ್ಯ ಕಬಳಿಸಿರುವುದು ಸತ್ಯ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಮುಡಾ ಹಗರಣದ ಬಗ್ಗೆ ಮಾತನಾಡಿದ ವಿಜಯೇಂದ್ರ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿರದಿದ್ದರೆ ಮತ್ತು ಅವರಿಗೆ 14 ಸೈಟುಗಳು ನ್ಯಾಯಯುತವಾಗೇ ಸಿಕ್ಕಿದ್ದರೆ, ಯಾಕೆ ಚರ್ಚೆಯಿಂದ ಓಡಿಹೋಗುತ್ತಿದ್ದಾರೆ, ಯಾಕೆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಎಂದರು.
ಅರ್ಜಿಗಳನ್ನು ಕಡೆಗಣಿಸಿ ಸಿದ್ದರಾಮಯ್ಯನವರ ಕುಟುಂಬಕ್ಕೆ ಸೈಟುಗಳನ್ನು ನೀಡಿರುವುದು ನ್ಯಾಯಯುತವೇ? ಅನ್ಯಾಯ ಅಕ್ರಮಗಳು ನಡೆದಾಗ ವಿರೋಧ ಪಕ್ಷದ ಸದಸ್ಯರಾಗಿರುವ ನಾವು ಪ್ರಶ್ನೆ ಕೇಳುತ್ತೇವೆ, ಅದು ನಮ್ಮ ಅಧಿಕಾರ ಮತ್ತು ಹಕ್ಕು. ಪ್ರಶ್ನೆಗಳಿಗೆ ಉತ್ತರ ನೀಡುವುದು ಸರ್ಕಾರದ ಮುಖ್ಯಸ್ಥನಾಗಿರುವ ಮುಖ್ಯಮಂತ್ರಿಯವರ ಜವಾಬ್ದಾರಿ, ಅವರು ಪಲಾಯನ ಮಾಡುವುದರಲ್ಲಿ ಅರ್ಥವಿಲ್ಲ. ಮುಡಾ ಹಗರಣದ ಬಗ್ಗೆ ನಾವು ವಿರೋಧ ಪಕ್ಷವಾಗಿ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.


