ವಿಜಯಸಾಕ್ಷಿ ಸುದ್ದಿ, ಗದಗ: ಆಂತರಿಕ ಭದ್ರತೆಯ ಕಾಳಜಿ ಇಲ್ಲದೆ ಇರುವದರಿಂದ ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಗೃಹ ಸಚಿವ ಜಿ. ಪರಮೆಶ್ವರ ರಾಜೀನಾಮೆ ನೀಡಬೇಕು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಬಾಸ್ಕರ ರಾವ್ ಆಗ್ರಹಿಸಿದರು.
ನಗರದ ಪ್ರವಾಸಿ ಮಂದರಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿನ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ರಾಜ್ಯ ಸರಕಾರ ಮಾಡಬೇಕಾದ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎನ್‌ಐಎ ದಾಳಿ ನಡೆಯಿತು. ದಾಳಿ ಸಂದರ್ಭದಲ್ಲಿ ಜೈಲಿನಲ್ಲಿ ಕೆಲಸ ಮಾಡುವ ಮನೋವೈದ್ಯ, ಎಎಸ್‌ಐ ಹಾಗೂ ಭಯೋತ್ಪಾದಕನ ತಾಯಿಯನ್ನು ಎನ್‌ಐಎ ವಶಕ್ಕೆ ಪಡೆದಿದೆ. ಇದೆಲ್ಲ ತಂತ್ರಜ್ಞಾನದ ಆಧಾರದ ಮೇಲೆ ನಡೆದ ತನಿಖೆಯೇ ಹೊರತು ಎದುರು ಕೂತು ಮಾಡಿದ ತನಿಖೆಯಲ್ಲ ಎಂದು ಹೇಳಿದರು.
ಸರಕಾರಿ ಅಧಿಕಾರಿ ದೇಶವಿರೋಧಿ ಕೃತ್ಯದಲ್ಲಿ ಭಾಗಿಯಾದವರಿಗೆ ಮೊಬೈಲ್ ಕೊಟ್ಟಿದ್ದಾನೆ. ಪೊಲೀಸ್ ಅಧಿಕಾರಿಯೂ ಭಯೋತ್ಪಾದಕರಿಗೆ ಸಿಮ್‌ಕಾರ್ಡ್ ಕೊಟ್ಟಿದ್ದಾನೆ. ಸತೀಶಗೌಡ ಎನ್ನುವನು ದೇಶವಿರೋಧಿ ಚಟುವಟಿಯಲ್ಲಿ ಭಾಗಿಯಾಗಿದ್ದಾನೆ. ಇದೆಲ್ಲ ಕರ್ನಾಟಕ ಆಂತರಿಕ ಭದ್ರತಾ ಇಲಾಖೆಗೆ ತಿಳಿಯದಿರುವುದು ಖೇದಕರ ಸಂಗತಿ ಎಂದರು.
ಆಂತರಿಕ ಭದ್ರತೆ ಬಗ್ಗೆ ಯಾವ ರೀತಿ ಕೆಲಸ ಮಾಡಬೇಕು ಎಂದು ಸರಕಾರ ಸೂಚನೆ ಕೊಡಬೇಕು. ಸಚಿವ ಪರಮೇಶ್ವರ ಹಾಗೂ ಸಿಎಂ ಅವರಿಗೆ ಜೈಲಿನ ಮೇಲೆ ಅಷ್ಟೊಂದು ಸಹಾನುಭೂತಿ ಯಾಕೆ? ಜೈಲನ್ನು ಸ್ವಚ್ಛ ಮಾಡಬೇಕಿರುವುದು ಸರಕಾರದ ಕರ್ತವ್ಯ ಎಂದು ಹೇಳಿದರು.
ಸರಕಾರ ಸಿಮ್‌ಕಾರ್ಡ್ ಪಡೆಯುವದನ್ನು ಸಾಕಷ್ಟು ಸುಲಭ ಮಾಡಿದೆ. ಯಾರು ಬೇಕಾದರೂ ಆಧಾರ್ ಕಾರ್ಡ್ ತೆಗೆದುಕೊಂಡು ಸಿಮ್ ಪಡೆಯಬಹುದು. ಸಚಿವರು ಒಮ್ಮೆಯೂ ಈ ಬಗ್ಗೆ ಸಭೆ ನಡೆಸಿಲ್ಲ. ಇದರಿಂದ ಬಾಂಗ್ಲಾ ನುಸುಳುಕೋರರ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದರು.
ಗೃಹ ಸಚಿವರು ಬೆಂಗಳೂರು ಸೇರಿದಂತೆ ಕರ್ನಾಟಕದ ಜನರ ಜೀವನದ ಜೊತೆ ಚೆಲ್ಲಾಟ ಆಡಬಾರದು. ಸೆಲ್‌ಫೋನ್, ಸಿಮ್, ಕೆವೈಸಿ ಬಗ್ಗೆ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಗೃಹ ಸಚಿವರು ರಾಜೀನಾಮೆ ಕೊಡಬೇಕು. ಈ ಗೃಹ ಸಚಿವರು ಇನ್ನಷ್ಟು ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಭಯೋತ್ಪಾದಕರಿಂದ ಬಾಂಬ್ ಸ್ಪೋಟಗೊಂಡರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಲಿಂಗರಾಜ ಪಾಟೀಲ, ರಮೇಶ ಸಜ್ಜಗಾರ ಇದ್ದರು.
ಕರ್ನಾಟಕದಲ್ಲಿ ಆಂತರಿಕ ಭದ್ರತೆಗೆ ಧಕ್ಕೆ ಬರುವ ಘಟನೆ ನಡೆದಿದ್ದರೂ ಸಲಹೆ-ಸೂಚನೆ ಕೊಡುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಈ ಬಗ್ಗೆ ಏನೇ ಕೇಳಿದರೂ ಗೃಹ ಸಚಿವರು ತಿಳಿದುಕೊಂಡು ಹೇಳುತ್ತೇನೆ ಎಂದು ಉಡಾಫೆಯಿಂದ ತಳ್ಳಿಹಾಕುತ್ತಾರೆ. ತುಷ್ಟೀಕರಣ ನೀತಿಯಿಂದಾಗಿ ಕಾನೂನು ಸುವ್ಯಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಜೈಲಿನಲ್ಲಿ ಕಾನೂನುಬಾಹಿರ ಚಟುವಟಕೆಗಳು ನಡೆದಿದ್ದರಿಂದ ಗೃಹ ಸಚಿವರು ಜೈಲಿಗೆ ಭೇಟಿ ಕೊಟ್ಟು ಯಾರೋ ಕಿರಿಯ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದರು ಎಂದು ಭಾಸ್ಕರ್ ರಾವ್ ಹೇಳಿದರು.