ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ವಕೀಲರ ಕರ್ತವ್ಯ: ಸಚಿವ ಡಾ. ಎಚ್.ಕೆ. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ/ಹುಬ್ಬಳ್ಳಿ: ನ್ಯಾಯಕ್ಕಾಗಿ ನಿತ್ಯ ಸಾವಿರಾರು ಪ್ರಕರಣಗಳು ನ್ಯಾಯಾಲಯದ ಮುಂದೆ ಬರುತ್ತಿದ್ದು, ಸೂಕ್ತ ಸಮಯದಲ್ಲಿ ತ್ವರಿತವಾಗಿ ನ್ಯಾಯದಾನ ಒದಗಿಸುವ ನಿಟ್ಟಿನಲ್ಲಿ ವಕೀಲರು ಮತ್ತು ನ್ಯಾಯಾಧೀಶರು ಶ್ರಮಿಸಬೇಕಾಗಿದೆ. ಅಲ್ಲದೆ, ಅಣುಕು ನ್ಯಾಯಾಲಯಗಳಂತಹ ಸ್ಪರ್ಧೆಗಳಲ್ಲಿ ಬಡವರಿಗೆ ತ್ವರಿತ ನ್ಯಾಯ ದಾನವಾಗುವ ರೀತಿಯಲ್ಲಿ ಚಿಂತನೆ ಮತ್ತು ಚರ್ಚೆಗಳು ನಡೆದು, ಕಾನೂನು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕಾನೂನು ವಿದ್ಯಾಯಲಗಳು ಶ್ರಮಿಸಬೇಕು ಎಂದು ಸಂಸದೀಯ ವ್ಯವಹಾರ, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

Advertisement

ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯ ಹಾಗೂ ಕೆ.ಎಲ್.ಇ ಲಾ ಆಕಾಡಮಿ ವತಿಯಿಂದ ಆಯೋಜಿದ್ದ ರಾಷ್ಟ್ರಮಟ್ಟದ ಅಣುಕು ನ್ಯಾಯಾಲಯ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾಷೆಯ ಮೇಲೆ ಸಾಮರ್ಥ್ಯವಿದ್ದಾಗ ಮಾತ್ರ ಒಂದು ಪ್ರಕರಣವನ್ನು ಗೆಲ್ಲಲು ಸಾಧ್ಯವಾಗುತ್ತದೆ. ಸಂವಿಧಾನದ ವಿಧಿ 22ರಲ್ಲಿ ವಕೀಲ ವೃತ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದನ್ನು ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ನಿಮ್ಮ ಕರ್ತವ್ಯವಾಗಿದೆ. ವಕೀಲರು ಕಾನೂನು ಅಧ್ಯಯನ ಮಾಡುವುದರ ಜತೆಗೆ ನೈತಿಕ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದು ಕೂಡ ಮುಖ್ಯವಾಗಿದೆ ಎಂದರು.

ಸುಪ್ರೀಂಕೋರ್ಟ್ ನ್ಯಾಯಾಧೀಶ ಅಭಯ್ ಶ್ರೀನಿವಾಸ ಓಕ್ ಮಾತನಾಡಿ, ಅಣುಕು ನ್ಯಾಯಾಲಯಗಳಿಂದ ಕಾನೂನು ವಿದ್ಯಾರ್ಥಿಗಳಲ್ಲಿ ವಾದ ಮಂಡನೆ ಮಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಅಣುಕು ನ್ಯಾಯಾಲಯಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಮತ್ತು ವೃತ್ತಿ ಕೌಶಲ್ಯವನ್ನು ಹೆಚ್ಚಿಸುವ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಅಧ್ಯಯನ ಸ್ವರೂಪ ತಿಳಿಯುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಸೋಲು-ಗೆಲವು ಲೆಕ್ಕಾಚಾರ ಮಾಡದೇ ವಿಷಯವನ್ನು ಮಂಡಿಸುವುದಕ್ಕೆ ಮುಂದಾಗಬೇಕು ಎಂದರು.

ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸ ಶ್ರೀಶಾನಂದ ಮಾತನಾಡಿ, ನಾವು ಪ್ರಬುದ್ಧ ವಕೀಲರಾಗಿದ್ದೇವೆ ಎನ್ನುವ ಮನೋಭಾವನೆ ಬರಬಾರದು. ಅಣುಕು ನ್ಯಾಯಾಲಯವೇ ಬೇರೆ, ನೈಜ ನ್ಯಾಯಾಲಯಗಳಲ್ಲಿನ ಸ್ಥಿತಿ-ಗತಿಗಳೇ ಬೇರೆ. ಇಲ್ಲಿ ಸೋಲು-ಗೆಲವು ಮುಖ್ಯವಲ್ಲ, ನಾವು ಪ್ರಕರಣದ ಎಷ್ಟು ವಿಷಯವನ್ನು ಗ್ರಹಿಕೆ ಮಾಡಿಕೊಂಡಿದ್ದೇವೆ ಎಂಬುದು ಮುಖ್ಯವಾಗಿರುತ್ತದೆ. ಅಲ್ಲದೆ ನೈಜ ನ್ಯಾಯಾಲಯಗಳಲ್ಲಿ ತಮ್ಮನ್ನು ನಂಬಿಕೊAಡು ಬಂದಿರುವ ಕಕ್ಷಿದಾರರ ಜೀವ ಮತ್ತು ಮಾನ ಅಡಗಿರುತ್ತದೆ. ಆದ್ದರಿಂದ ಯುವ ವಕೀಲರು ಯಾವುದೇ ಪ್ರಕರಣಗಳೇ ಇರಲಿ ಅವುಗಳ ವಿಷಯ ವಸ್ತು ಮತ್ತು ಅದಕ್ಕೆ ಅವಶ್ಯವಿರುವ ಕಾನೂನುಗಳು ಮತ್ತು ಸಂಬAಧಿಸಿದ ನ್ಯಾಯಾಲಯದ ತೀರ್ಪುಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ನ್ಯಾಯಾಲಯಗಳಲ್ಲಿ ವಾದಪತ್ರದ ಜತೆಗೆ ವಾದವನ್ನು ಮಂಡನೆ ಮಾಡಬೇಕು ಎಂದರು.

ಸ್ಪರ್ಧೆಯಲ್ಲಿ ಬೆಳಗಾವಿಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದುಕೊಂಡರು. ತಮಿಳುನಾಡಿನ ಸವಿತಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡರು.

ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವಿಜಯಕುಮಾರ ಪಾಟೀಲ, ಮಖಿಮಣಿಗಣೇಶಯ್ಯ ಉಮಾ, ಉಮೇಶ ಮಂಜುನಾಥಭಟ್ಟ ಅಡಿಗ, ಕೆ.ಎಲ್.ಇ ಕಾನೂನು ಕಾಲೇಜಗಳ ನಿರ್ದೇಶಕ ಶ್ರೀಶೈಲಪ್ಪ ಮೆಟ್ಟಿಗುಡ್ಡ, ಬೆಂಗಳೂರು ಲಾ ಕಾಲೇಜಿನ ಪ್ರಾಚಾರ್ಯ ಮಲ್ಲಿಕಾರ್ಜುನಯ್ಯ, ಉಪನ್ಯಾಸಕ ಡಾ. ವಿಜಯ ಮುರದಂಡೆ, ಡಾ. ಶ್ರೀನಿವಾಸ ಪಾಲ್ಕೊಂಡ, ಡಾ. ಸಿ.ವಿ. ಜ್ಯೋತಿ, ಸಿ.ಎಚ್. ರಾಚನ್ನವರ, ಶರತ್ ದರಬಾರೆ ಪಾಲ್ಗೊಂಡಿದ್ದರು. ಉಪನ್ಯಾಸಕ ಆರ್.ಎಸ್. ಉಮೇಶ ಸ್ವಾಗತಿಸಿದರು. ಪ್ರಾಚಾರ್ಯ ಜೈಹನುಮಾನ ಎಚ್ ವಂದಿಸಿದರು.

ಇತ್ತೀಚೆಗೆ ನ್ಯಾಯಾಲಯಗಳಲ್ಲಿ ತತ್ವರಿತಗತಿಯಲ್ಲಿ ನ್ಯಾಯ ದೊರೆಯಬೇಕೆಂದು ಜನರು ಹೆಸರಾಂತ ವಕೀಲರಿಗೆ ಅವರು ಕೇಳಿದಷ್ಟು ದುಡ್ಡು ಕೊಟ್ಟು ಕರೆದುಕೊಂಡು ಬಂದು ನ್ಯಾಯಾಲಯಗಳಲ್ಲಿ ತಾವು ಹೂಡಿದ ದಾವೆಗಳನ್ನು ಕೇವಲ ೬ ತಿಂಗಳಗಳಲ್ಲಿ ಇತ್ಯರ್ಥಪಡಿಸಿಕೊಳ್ಳುತ್ತಾರೆ. ಆದರೆ, ಬಡವರು ಮತ್ತು ನಿರ್ಗತಿಕರು ನ್ಯಾಯಾಲಯಕ್ಕೆ ಅಲೆದು ಅಲೆದು ಬೇಸತ್ತುಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಆದ್ದರಿಂದ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಜಿಲ್ಲಾ, ತಾಲೂಕಾ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ವಕೀಲರು ಬಾಕಿಯಿರುವ ಪ್ರಕರಣಗಳನ್ನು ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡುವುದರೊಂದಿಗೆ ಎಲ್ಲರಿಗೂ ತ್ವರಿತ ಮತ್ತು ಸೂಕ್ತ ಸಮಯದಲ್ಲಿ ನ್ಯಾಯ ದಾನ ಮಾಡುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ.

– ಎಚ್.ಕೆ. ಪಾಟೀಲ.

ಕಾನೂನು ಸಚಿವರು.


Spread the love

LEAVE A REPLY

Please enter your comment!
Please enter your name here