ಮಧ್ಯಪ್ರದೇಶ:- ಆಸ್ತಿ ಕೊಡಲಿ, ಬಿಡಲಿ ಪೋಷಕರನ್ನು ನೋಡಿಕೊಳ್ಳೋದು ಮಕ್ಕಳ ಜವಬ್ದಾರಿ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವೃದ್ಧ ಪೋಷಕರ ಪೋಷಣೆಗೆ ಸಂಬಂಧಿಸಿದ ವಿಷಯದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಸಿಗಲಿ ಬಿಡಲಿ ಆದರೆ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಭೋಪಾಲ್ನ ನಿವಾಸಿಯೊಬ್ಬರು ತನ್ನ ತಾಯಿಯ ಆಸ್ತಿಯಲ್ಲಿ ತನಗೆ ಪಾಲು ಸಿಗಲಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ತನ್ನೊಂದಿಗೆ ಉಳಿಸಿಕೊಳ್ಳಲು ಮಗ ನಿರಾಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು.
ನ್ಯಾಯಮೂರ್ತಿ ಜಿ.ಎಸ್ ಅಹ್ಲುವಾಲಿಯಾ ಅವರು ಇಡೀ ಪ್ರಕರಣದ ಎಲ್ಲಾ ಸಂಗತಿಯನ್ನು ಸಾವಧಾನವಾಗಿ ಆಲಿಸಿ ಬಳಿಕ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಸಿಗಲಿ, ಬಿಡಲಿ ವಯಸ್ಸಾದ ಮೇಲೆ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಹೇಳಿದ್ದಾರೆ.
ಜೀವನಾಂಶಕ್ಕಾಗಿ ತಾಯಿಗೆ ಪ್ರತಿ ತಿಂಗಳು 2 ಸಾವಿರ ನೀಡುವಂತೆ ಸೂಚಿಸಿದ್ದಾರೆ. ನರಸಿಂಗಪುರದ ನಿವಾಸಿಯಾಗಿರುವ ವೃದ್ಧೆಗೆ ನಾಲ್ವರು ಗಂಡು ಮಕ್ಕಳಿದ್ದು, ಒಬ್ಬ ಮಗನಿಗೆ ಆಸ್ತಿಯಲ್ಲಿ ಪಾಲು ಸಿಕ್ಕಿಲ್ಲ.
ತಮ್ಮ ವಯಸ್ಸಾದ ತಾಯಿಯ ಪೋಷಣೆಗಾಗಿ ಪ್ರತಿ ತಿಂಗಳು 3,000 ರೂಪಾಯಿಗಳನ್ನು ನೀಡುವಂತೆ ನಾಲ್ವರು ಪುತ್ರರಿಗೆ ಸೂಚಿಸಿದರು. ಇದಾದ ನಂತರ ಎಸ್‌ಡಿಎಂ ಆದೇಶವನ್ನು ಪ್ರಶ್ನಿಸಿ ಮಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.
ಪುತ್ರರು ತಮ್ಮ ಪೋಷಕರ ಆಸ್ತಿಯನ್ನು ವಂಚನೆಯಿಂದ ಅಥವಾ ಪೋಷಕರನ್ನು ತಪ್ಪುದಾರಿಗೆಳೆಯುವ ಮೂಲಕ ತಮ್ಮ ಹೆಸರಿಗೆ ವರ್ಗಾಯಿಸಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಆ ನೋಂದಣಿ ತಿರಸ್ಕೃತವಾಗುತ್ತದೆ. ಅದನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.