ಹುಬ್ಬಳ್ಳಿ :- ಮುಡಾ ಅವ್ಯವಹಾರದಲ್ಲಿ ಸಿದ್ದರಾಮಯ್ಯ ಸಿಕ್ಕಿಹಾಕಿಕೊಂಡಿರೋದು ನಿಜ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿ.ನಾಗೇಂದ್ರ ರಾಜೀನಾಮೆ ಕೊಟ್ಟರು. ಮುಡಾ ಅವ್ಯವಹಾರದಲ್ಲಿ ಸಿದ್ದರಾಮಯ್ಯ ಸಿಕ್ಕಿಹಾಕಿಕೊಂಡಿದ್ದಾರೆ ಎಂದರು. ಮೊದಲು ಹಗರಣ ನಡೆದಿಲ್ಲ ಎಂದಿದ್ದವರು ಈಗ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಸಿಎಂ ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ. ಭಂಡತನಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ಮಾಡಿದ್ದಾರೆ.
ಅದು ಹಿಂದಿನ ಸರ್ಕಾರದ ಅವಧಿಯಲ್ಲಿ ಸೈಟ್ ಹಂಚಿಕೆಯಾಗಿತ್ತು ಅಂತಾರೆ. ಇವರು ಅಧಿಕಾರಕ್ಕೆ ಬಂದು 1 ವರ್ಷವಾದರೂ ಯಾಕೆ ತನಿಖೆ ಮಾಡಿಲ್ಲ? ಬಿಜೆಪಿ ಅವಧಿಯಲ್ಲಿ ತಪ್ಪಾಗಿದ್ದರೆ ಎಸ್ಐಟಿ ಅಥವಾ ಸಿಬಿಐ ತನಿಖೆಗೆ ವಹಿಸಿ. ಮುಡಾ ಅಕ್ರಮದ ತನಿಖೆ ಸಿಬಿಐಗೆ ವಹಿಸುವ ಧೈರ್ಯ ನಿಮಗಿದೆಯಾ ಎಂದು ಪ್ರಶ್ನಿಸಿದ್ದಾರೆ.
ಅರ್ಕಾವತಿ ಡಿನೋಟಿಫೈ ಪ್ರಕರಣ ಸಿಬಿಐಗೆ ಕೊಡಿ ಅಂದ್ರೂ ಕೊಡಲಿಲ್ಲ. ನಾನು ಸಾಕ್ಷ್ಯಧಾರ ನೀಡಿದ ಮೇಲೆ ಕೆಂಪಣ್ಣ ಆಯೋಗ ರಚಿಸಿ ತನಿಖೆ ಮಾಡಿ ರಿಪೋರ್ಟ್ ನೀಡಿದ್ದರು. ಆದರೆ ಕೆಂಪಣ್ಣ ಆಯೋಗದ ವರದಿಯನ್ನು ಸಿದ್ದರಾಮಯ್ಯ ಸದನಕ್ಕೆ ನೀಡಲಿಲ್ಲ. ನೀವು ತಪ್ಪಿತಸ್ಥರಾಗಿರುವ ಕಾರಣ ಸದನದಲ್ಲಿ ವರದಿ ಮಂಡನೆ ಮಾಡಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಖಾಸಗಿ ವಲಯದಲ್ಲಿ ಮೀಸಲಾತಿ ವಿಚಾರ ಹರಿಬಿಟ್ಟರು. ಸಿಎಂ ಸಿದ್ದರಾಮಯ್ಯನವರದು ವಿತಂಡವಾದ ಎಂದು ವಾಗ್ದಾಳಿ ಮಾಡಿದ್ದಾರೆ.