ಬೆಂಗಳೂರು:- ಕಾಂಗ್ರೆಸ್ ಪಕ್ಷದ ಆಂತರಿಕ ಕಲಹದಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡುವುದು ಅನಗತ್ಯ ಎಂದು ಸಂಸದ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ, ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹದ ವಿಚಾರದಲ್ಲಿ ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡುವುದು ಅನಗತ್ಯ. ಅವರಿಗೆ ಇದರಲ್ಲಿ ಏನೂ ಕೆಲಸ ಇಲ್ಲ ಎಂದು ಅಭಿಪ್ರಾಯಪಟ್ಟರು.
ಸರ್ಕಾರದಲ್ಲಿ ನಡೆಯುತ್ತಿರುವ ಕುರ್ಚಿ ಕಲಹದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೆಚ್‌ಡಿಕೆ, ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ಅಧಿಕಾರ ಹೋದಾಗ ಯಾವ ಮಠಾಧಿಪತಿಗಳ ನೆರವನ್ನು ನಾನು ಕೇಳಲಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ. ಒಕ್ಕಲಿಗ ಸಮಾಜ ಅಷ್ಟೇ ಅಲ್ಲ, ಬೇರೆ ಯಾವುದೇ ಸಮಾಜದ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಜಾತಿ ಧರ್ಮಗಳ ವಿಚಾರ ಹೇಳಿಕೊಂಡು ಧಾರ್ಮಿಕ ಕ್ಷೇತ್ರಗಳನ್ನ ದುರುಪಯೋಗಪಡಿಸಿಕೊಂಡು, ರಾಜಕಾರಣ ಮಾಡೋದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು.
ಸಮಾಜದಲ್ಲಿ ಜಾತಿ ಸಂಘರ್ಷಕ್ಕೆ ಅವಕಾಶ ಇರಬಾರದು. ಅದಕ್ಕೆ ಯಾರೂ ಕಾರಣ ಆಗಬಾರದು. ನಾನು ಧರ್ಮಗುರುಗಳಿಗೆ ಮನವಿ ಮಾಡುವುದು ಇಷ್ಟೇ. ಸಮಾಜದಲ್ಲಿ ಶಾಂತಿ ನೆಮ್ಮದಿ ಮುಖ್ಯ. ಜಾತಿ ಮತ್ತು ಧರ್ಮ ಸಂಘರ್ಷ ಮಾಡಬಾರದು. ಅದು ರಾಜ್ಯಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಪಕ್ಷದ ಕಲಹದಲ್ಲಿ ಜಾತಿ ಧರ್ಮಗಳನ್ನು ಎಳೆದು ತರೋದು ಬೇಕಾಗಿಲ್ಲ ಎಂದು ತಿಳಿಸಿದರು.



