ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಯುವ ನಿರ್ಧಾರವನ್ನು ರಾಜ್ಯ ಸರ್ಕಾರವೇ ತೆಗೆದುಕೊಂಡಿದ್ದು, ಕೇಂದ್ರ ಸರ್ಕಾರದ ಪತ್ರಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ದರ ನಿಗದಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲ. ದೆಹಲಿ ಮೆಟ್ರೋ ಅನುಸರಿಸುವ ಸೂತ್ರದಂತೆ ಮರು ಲೆಕ್ಕಾಚಾರ ಮಾಡಲು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹಳೆಯ ದರ ನಿಗದಿ ಸಮಿತಿ 09-02-2025ರಂದು ಶೇ.5 ದರ ಏರಿಕೆಗೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಜಾರಿಯಾಗಿದೆ. ಹೊಸ ದರ ನಿಗದಿ ಸಮಿತಿ ರಚನೆಯಾಗುವ ತನಕ ದರ ಏರಿಕೆ ತಡೆಯಲು ಸರ್ಕಾರ ನಿರ್ಧರಿಸಿದೆ ಎಂದರು.
ಜನರಿಗೆ ಹಾಗೂ ಮೆಟ್ರೋ ಸಂಸ್ಥೆಗೆ ಭಾರವಾಗದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದು ರಾಜಕೀಯವಲ್ಲ, ಜನರ ಪರವಾದ ಹೋರಾಟ. ರಾಜ್ಯ ಸರ್ಕಾರ ಈಗಾಗಲೇ ಕ್ಯಾಶ್ ಲಾಸ್ ಹಾಗೂ ಸಾಲ ಮರುಪಾವತಿಗೆ ಒಟ್ಟು 5,066.55 ಕೋಟಿ ರೂ. ಪಾವತಿಸಿದೆ ಎಂದರು.



