HomeBagalkotಇನ್ನೊಬ್ಬ ಮೇಟಿ ಹುಟ್ಟುವುದು ಕಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

ಇನ್ನೊಬ್ಬ ಮೇಟಿ ಹುಟ್ಟುವುದು ಕಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ: ಹೆಚ್.ವೈ. ಮೇಟಿಯವರು ನಿಷ್ಠಾವಂತ ರಾಜಕಾರಣಿಯಾಗಿದ್ದರು. ಬಾಗಲಕೋಟೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವ ಕನಸು ಹೊತ್ತಿದ್ದ ಮೇಟಿಯವರು ಈ ಸಂದರ್ಭದಲ್ಲಿ ಇಲ್ಲದಿರುವುದು ವಿಷಾದನೀಯ. ಅವರ ಆಸೆಯಂತೆ ಟೆಂಡರ್ ಕೂಡ ಈಗಾಗಲೇ ಕರೆಯಲಾಗಿದೆ. ಶೀಘ್ರದಲ್ಲಿಯೇ ಕಾಲೇಜು ಮತ್ತು ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಬುಧವಾರ ಬಾಗಲಕೋಟೆಯಲ್ಲಿ ಶಾಸಕರಾಗಿದ್ದ ಹೆಚ್.ವೈ. ಮೇಟಿಯವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
1983ರಿಂದ ಹೆಚ್.ವೈ. ಮೇಟಿಯವರೊಂದಿಗೆ ಒಡನಾಡವಿತ್ತು. ನಾನು ಜನತಾ ಪಕ್ಷ, ಜನತಾ ದಳ ಹಾಗೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ ನಾನು ಕೈಗೊಳ್ಳುವ ತೀರ್ಮಾನಗಳಿಗೆ ಬದ್ಧರಾಗಿದ್ದರು. ಅಹಿಂದ ಸಂಘಟನೆಯಲ್ಲಿ ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದವರು. ಒಂದು ವರ್ಷ ಕಿರಿಯನಾಗಿದ್ದರೂ, ನನ್ನನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೇಟಿಯವರು ವಿನಯವಂತರಾಗಿದ್ದರು. ಅಧಿಕಾರ ಶಾಶ್ವತವಾದುದಲ್ಲ. ಜನರಿಂದ ದೊರಕುವ ಅಧಿಕಾರವನ್ನು ಜನರ ಒಳಿತಿಗಾಗಿ ಬಳಸಬೇಕು. ಬಹಳ ವಿದ್ಯಾವಂತರಲ್ಲದಿದ್ದರೂ, ರಾಜಕೀಯ ತತ್ವಗಳನ್ನು ತಪ್ಪದೇ ಪಾಲಿಸುತ್ತಿದ್ದರು. ಜನರೊಂದಿಗೆ ಬೆರೆಯುವ ಗುಣವಿದ್ದ ಮೇಟಿಯವರು ಕುರುಬ ಸಮುದಾಯದವರಾಗಿದ್ದರೂ, ಜಾತ್ಯಾತೀತ ತತ್ವದ ಪಾಲಕರಾಗಿದ್ದರು. ಎಲ್ಲ ಜಾತಿಧರ್ಮಗಳನ್ನು ಪ್ರೀತಿಯಿಂದ ಕಾಣುವ ಸ್ವಭಾವದವರಾಗಿದ್ದರು ಎಂದರು.

ಮೇಟಿಯವರ ನಿಧನದಿಂದ ದುಃಖವಾಗಿದ್ದು, ವೈಯಕ್ತಿಕವಾಗಿ ದೊಡ್ಡ ನಷ್ಟವಾಗಿದೆ. 1996ರಲ್ಲಿ ಬಾಗಲಕೋಟೆಯಲ್ಲಿ ಸಮೀಕ್ಷೆ ಮಾಡಿಸಿ, ಮೇಟಿಯವರಿಗೆ ಲೋಕಸಭೆಯಲ್ಲಿ ಸ್ಪರ್ಧಿಸಲು ನಿರ್ಧಾರವಾಗಿತ್ತು. ಆ ಸಂದರ್ಭದಲ್ಲಿ ಸಚಿವರಾಗಿದ್ದ ಮೇಟಿಯವರು, ನನ್ನ ಮಾತನ್ನು ಗೌರವಿಸಿ, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಸಾಧಿಸಿದರು. ಜನಾನುರಾಗಿಯಾಗಿದ್ದರೆ ಮಾತ್ರ ಬಾಗಲಕೋಟೆ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ದೇವೇಗೌಡರು ಪ್ರಧಾನಮಂತ್ರಿಗಳಾಗಲು ಇವರು ಕಾರಣರು ಎಂದರು.

ಅವರ ಜನಪ್ರಿಯತೆ ಎಷ್ಟರ ಮಟ್ಟಿಗಿತ್ತೆಂದರೆ ಬಾಗಲಕೋಟೆಯಲ್ಲಿ ಒಬ್ಬ ಕುರುಬ ಸಮುದಾಯದವರು ಗೆಲ್ಲುವುದು ಸುಲಭದ ಮಾತಲ್ಲ. ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಅವರಲ್ಲಿತ್ತು. ಪಂಚಾಯತಿ ಹಾಗೂ ಎ.ಪಿ.ಎಂ.ಸಿ ಅಧ್ಯಕ್ಷರಾಗಿ, ಸಚಿವ ಸ್ಥಾನವನ್ನು ಅಲಂಕರಿಸುವುದು ಸುಲಭದ ಮಾತಲ್ಲ. ಹಂತ ಹಂತವಾಗಿ ಮಠಟಿಲುಗಳನ್ನು ಏರಿಕೊಂಡು ಬೆಳೆದವರು ಮೇಟಿಯವರು. ಈ ಬಾರಿ ಮುಖ್ಯಮಂತ್ರಿಯಾದ ಮೇಲೆ ನನ್ನ ಬಳಿ ಅಪರೂಪಕ್ಕೆ ಬರುತ್ತಿದ್ದರು. ನನ್ನ ಅನುಯಾಯಿಗಳಲ್ಲಿ ಮೇಟಿ ಅಗ್ರಗಣ್ಯರು. ಸರಳ ಸಜ್ಜನಿಕೆಯ ವ್ಯಕ್ತಿ. ಆಸೆ, ದುರ್ಬಾಸೆಗಳಿದ್ದ ವ್ಯಕ್ತಿಯಾಗಿರಲಿಲ್ಲ ಎಂದರು.

ಹುಟ್ಟು ಆಕಸ್ಮಿಕ, ಸಾವು ಖಚಿತ. ಇವೆರಡರ ಮಧ್ಯೆ ಇರುವ ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು ಮುಖ್ಯ. ಮೇಟಿಯವರು ಸಾರ್ಥಕ ಜೀವನ ನಡೆಸಿದ್ದಾರೆ. ಅವರ ಆದರ್ಶಗಳು ಇತರರಿಗೆ ಮಾದರಿಯಾಗಲಿ. ಇನ್ನೊಬ್ಬ ಮೇಟಿ ಹುಟ್ಟುವುದು ಕಷ್ಟ. ಮೇಟಿಗೆ ಮೇಟಿಯೇ ಸಾಟಿ. ಜನರ ಆಶೀರ್ವಾದದಿಂದ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಮೇಟಿಯವರ ಅಭಿಮಾನಿಗಳು, ಸ್ನೇಹಿತರಿಗೆ ಹಾಗೂ ಅವರ ಕುಟುಂಬದವರಿಗೆ ಅವರ ಸಾವಿನಿಂದಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ, ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!