ವಿಜಯಸಾಕ್ಷಿ ಸುದ್ದಿ, ಗದಗ: ಕಳೆದ 39 ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಇತಿಹಾಸ ಸಂಶೋಧಕರ ಸಮ್ಮೇಳನಗಳು, ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮಗಳು ಮತ್ತು ಇತಿಹಾಸ ದರ್ಶನದಂತಹ ಮಹತ್ವದ ಸಂಪುಟಗಳ ಪ್ರಕಟಣೆಯ ಮೂಲಕ ಕರ್ನಾಟಕ ಇತಿಹಾಸ ಅಕಾಡೆಮಿಯು ಯುವ ಇತಿಹಾಸ ಸಂಶೋಧಕರಿಗೆ ಮಾರ್ಗದರ್ಶಿ ದೀಪವಾಗಿದೆ ಎಂದು ಹಿರಿಯ ಇತಿಹಾಸ ಸಂಶೋಧಕರಾದ ಡಾ. ಲಕ್ಷ್ಮಣ ತೆಲಗಾವಿ ಹೇಳಿದರು.
ಅವರು ಗದುಗಿನ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಇವುಗಳ ಆಶ್ರಯದಲ್ಲಿ ಇತಿಹಾಸ ಅಕಾಡೆಮಿಯ ರಾಷ್ಟ್ರೀಯ ವಾರ್ಷಿಕ ಸಮ್ಮೇಳನದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.
ಕರ್ನಾಟಕ ಇತಿಹಾಸ ಅಕಾಡೆಮಿಯು ಹಿರಿಯ ಇತಿಹಾಸ ತಜ್ಞ ಡಾ. ಸೂರ್ಯನಾಥ ಕಾಮತರಿಂದ ಸ್ಥಾಪನೆಗೊಂಡು ವಿವಿಧ ಇತಿಹಾಸ ಸಂಶೋಧಕರಿಗೆ ವೇದಿಕೆಯಾಗಿ ಇದೀಗ ಡಾ. ದೇವರಕೊಂಡರೆಡ್ಡಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಎಲ್ಲ ‘ಇಸಂ’ಗಳಿಂದ ದೂರವಾಗಿ ವಸ್ತುನಿಷ್ಠ ಇತಿಹಾಸಕ್ಕೆ ಪೂರಕವಾಗಿ ಆಕರಗಳನ್ನು ಸೃಷ್ಟಿಸುವ ಮಹತ್ವಪೂರ್ಣ ಸಂಘಟನೆಯಾಗಿದೆ. ಇದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಯುವ ಸಂಶೋಧಕರ ಮೇಲಿದೆ ಎಂದು ಹೇಳಿದರು.
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಶರಣು ಗೋಗೇರಿ ಮಾತನಾಡಿ, ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಲಕ್ಕುಂಡಿ ಪ್ರಾಧಿಕಾರ ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದೆ. ಈಗಾಗಲೇ ಲಕ್ಕುಂಡಿ ಪರಿಸರದ 13 ದೇವಸ್ಥಾನಗಳ ಪುನರುತ್ಥಾನ ಕೈಗೊಂಡಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಲಕ್ಕುಂಡಿ ಉತ್ಖನನಕ್ಕೆ ಚಾಲನೆ ನೀಡಿದ್ದಾರೆ. ಕಳೆದ ವರ್ಷ ಲಕ್ಕುಂಡಿ ಪರಿಸರದ ಪ್ರಾಚ್ಯ ವಸ್ತುಗಳ ಅನ್ವೇಷಣಾ ಹಾಗೂ ಸಂರಕ್ಷಣಾ ಕಾರ್ಯವನ್ನು ಕೈಗೊಂಡಿದ್ದು, ನಾಲ್ಕು ಎಕರೆ ಬಯಲು ಜಾಗದಲ್ಲಿ ವಿಶಿಷ್ಟ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಲಕ್ಕುಂಡಿ ಪರಿಸರ ಅಭಿವೃದ್ಧಿಗೆ ಇತಿಹಾಸ ಸಂಶೋಧಕರು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಹೇಳಿದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಸಮ್ಮೇಳನ ಆಯೋಜನೆಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಸಹಾಯಕ ನಿರ್ದೇಶಕ ಡಾ. ಅಬ್ದುಲ್ ಅಜೀಜ್ ಮುಲ್ಲಾ ಸರ್ವರನ್ನು ಸ್ವಾಗತಿಸಿದರು. ಪ್ರೊ. ಶಕುಂತಲಾ ಸಿಂಧೂರ ನಿರೂಪಿಸಿದರು. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಲ್. ರಾಜಶೇಖರ ವಂದಿಸಿದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಇತಿಹಾಸ ಸಂಶೋಧಕರು, ಉಪನ್ಯಾಸಕರು ಪಾಲ್ಗೊಂಡಿದ್ದರು.
ಬಾಕ್ಸ್
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಪರಮಶಿವಮೂರ್ತಿ ಮಾತನಾಡಿ, ಇತಿಹಾಸ ಅಕಾಡೆಮಿಯು ಪ್ರತಿವರ್ಷ ನೂರಾರು ಹೊಸ ಶಾಸನಗಳ ಸಂಶೋಧನೆ, ದೇವಾಲಯ, ಮೂರ್ತಿ ಶಿಲ್ಪಗಳ ವಿಶ್ಲೇಷಣೆ, ಪ್ರಾಚ್ಯವಸ್ತು ಸಂರಕ್ಷಣೆಯ ಮಹತ್ತರ ಕಾರ್ಯವನ್ನು ಮಾಡುತ್ತಾ ಬಂದಿದೆ. ಹೆಚ್ಚು ಹೆಚ್ಚು ಜನರು ಇದರ ಸದಸ್ಯರಾಗುವುದರ ಮೂಲಕ ನಮ್ಮ ನಾಡಿನ ಇತಿಹಾಸ, ಸಂಸ್ಕೃತಿಯನ್ನು ಉಳಿಸಿ-ಬೆಳೆಸಬೇಕಾಗಿದೆ ಎಂದು ಹೇಳಿದರು.


