ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಳೆದ ಆರು ತಿಂಗಳ ವೇತನ ಬಾಕಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ನರೇಗಾ ನೌಕರರು ನಡೆಸುತ್ತಿರುವ ಅಸಹಕಾರ ಚಳುವಳಿ 9ನೇ ದಿನಕ್ಕೆ ಮುಂದುವರೆದಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡ ನರೇಗಾ ನೌಕರರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವಂತೆ ಆಗ್ರಹಿಸಿ ಮಂಗಳವಾರ ಶಾಸಕ ಡಾ. ಚಂದ್ರು ಲಮಾಣಿಯವರಿಗೆ ಮನವಿ ಅರ್ಪಿಸಿದರು.
ನರೇಗಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೌಕರರು ಜುಲೈ 7ರಿಂದ ಅಸಹಕಾರ ಚಳುವಳಿ ಆರಂಭಿಸಿದ್ದು, ವೇತನ ವಿಳಂಬ, ಆರೋಗ್ಯ ವಿಮೆ ಹಾಗೂ ಭದ್ರತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸುತ್ತಿದ್ದಾರೆ. ಅಸಹಕಾರ ಚಳವಳಿ ಹಮ್ಮಿಕೊಂಡಿದ್ದ ಸ್ಥಳಕ್ಕೆ ಆಗಮಿಸಿದ ಶಾಸಕರಿಗೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರು ಕಳೆದ ಆರು ತಿಂಗಳಿನಿಂದ ವೇತನವಿಲ್ಲದೇ ಜೀವನ ನಡೆಸುವುದು ಕಷ್ಟವಾಗಿದ್ದು, ಮಕ್ಕಳ ಶಾಲಾ ಶುಲ್ಕ, ವೈದ್ಯಕೀಯ ಸೇವೆಗಳಿಗೆ ಇನ್ನೊಬ್ಬರಲ್ಲಿ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಮ್ಮ ಅಳಲು ತೋಡಿಕೊಂಡರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಸರ್ಕಾರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಕೆಳಹಂತದಲ್ಲಿ ಕೆಲಸ ಮಾಡುವ ನೌಕರರಿಗೆ ಆರು ತಿಂಗಳ ವೇತನ ಇಲ್ಲ ಎಂದರೆ ಕಷ್ಟವಾಗುತ್ತದೆ. ಸರ್ಕಾರ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರಲ್ಲದೇ, ಈಗಾಗಲೇ ಸರ್ಕಾರದ ಅಧಿಕಾರಿಗಳು, ಸಚಿವರೊಂದಿಗೆ ಮಾತನಾಡಿದ್ದು, ಆದಷ್ಟು ಬೇಗ ನಿಮ್ಮ ಸಮಸ್ಯೆ ಬಗೆಹರಿಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ಟಿಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಬಿಎಫ್ಟಿ, ಗ್ರಾಮ ಕಾಯಕ ಮಿತ್ರರು, ತಾಂಡಾ ರೋಜಗಾರ ಮಿತ್ರರು ಇದ್ದರು.