ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ನಲ್ಲಿ ಕಣಕ್ಕಿಳಿಯಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಅದರಂತೆ ಶ್ರೀಲಂಕಾ ವಿರುದ್ಧದ ಸರಣಿಯೊಂದಿಗೆ ಹೊಸ ಅಧ್ಯಾಯ ಶುರುವಾಗಲಿದೆ. ಈ ಅಧ್ಯಾಯಕ್ಕೂ ಮುನ್ನ ಮತ್ತದೇ ಪ್ರಶ್ನೆ ಎದುರಾಗಿದೆ.
ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರಿಗೆ ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆ ಕೇಳಿ ಬರುತ್ತಿದ್ದಂತೆ ಗಂಭೀರ್ ಕೆಲ ಕ್ಷಣ ವಿಚಲಿತರಾದರು. ಅಲ್ಲದೆ ತುಸು ಖಾರವಾಗಿಯೇ ಉತ್ತರ ನೀಡಿದರು.
ನನ್ನ ಹಾಗೂ ವಿರಾಟ್ ಕೊಹ್ಲಿ ನಡುವೆ ಸಂಬಂಧ ಸರಿಯಿಲ್ಲ ಎಂಬುದು ಕೇವಲ ವದಂತಿಗಳು ಅಷ್ಟೇ. ಇದೆಲ್ಲಾ ಟಿಆರ್ಪಿಗಾಗಿ ಒಳ್ಳೆಯದು. ಆದರೆ ನನ್ನ ಹಾಗೂ ಕೊಹ್ಲಿ ನಡುವೆ ಉತ್ತಮ ಸಂಬಂಧವಿದೆ. ನಾವಿಬ್ಬರೂ 140 ಕೋಟಿ ಭಾರತೀಯರನ್ನು ಪ್ರತಿನಿಧಿಸುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ ಎಂದು ಗಂಭೀರ್ ಹೇಳಿದ್ದಾರೆ.
ನಾವಿಬ್ಬರು ಸಂದೇಶಗಳನ್ನು ಹಂಚಿಕೊಂಡಿದ್ದೇವೆ. ನಾನು ಕೋಚ್ ಆಗುವ ಮುನ್ನ ಅಥವಾ ಆದ ಬಳಿಕ ಚಾಟ್ ಮಾಡಿದ್ದೇವೆಯೇ ಎಂಬುದು ಇಲ್ಲಿ ಮುಖ್ಯವಲ್ಲ. ವಿರಾಟ್ ಕೊಹ್ಲಿ ವಿಶ್ವ ದರ್ಜೆಯ ಆಟಗಾರ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಹೀಗಾಗಿ ನನ್ನ ಹಾಗೂ ಕೊಹ್ಲಿ ನಡುವಣ ಸಂಬಂಧ ಸರಿಯಿಲ್ಲ ಎಂಬುದು ಕೇವಲ ಊಹಪೋಹ ಅಷ್ಟೇ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾದ ಬೆನ್ನಲ್ಲೇ ಹುಟ್ಟಿಕೊಂಡ ಪ್ರಶ್ನೆ ಎಂದರೆ ವಿರಾಟ್ ಕೊಹ್ಲಿ ಜೊತೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದು. ಇದಕ್ಕೆ ಕಾರಣ ಕೊಹ್ಲಿ-ಗಂಭೀರ್ ಸೇರಿದಂತೆ ಕಂಡು ಬರುವ ವಾಕ್ಸಮರ, ಜಗಳ. ಇದಕ್ಕೆ ಸಾಕ್ಷಿಯಾಗಿ ಹಲವು ಐಪಿಎಲ್ ಪಂದ್ಯಗಳಿವೆ.
ಶ್ರೀಲಂಕಾ ಸರಣಿಯಲ್ಲಿ ಗೌತಿ-ಕೊಹ್ಲಿ:
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. 2016 ರವರೆಗೆ ವಿರಾಟ್ ಕೊಹ್ಲಿ ಗಂಭೀರ್ ಜೊತೆಯಾಗಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಇದೀಗ ಗಂಭೀರ್ ಕೋಚ್ ಆಗಿ ಕಾಣಿಸಿಕೊಳ್ಳುತ್ತಿದ್ದರೆ, ಕೊಹ್ಲಿ ಆಟಗಾರನಾಗಿ ಭಾರತದ ಪರ ಕಣಕ್ಕಿಳಿಯಲಿದ್ದಾರೆ.