ವಿಜಯಸಾಕ್ಷಿ ಸುದ್ದಿ, ಗದಗ: ಗಜೇಂದ್ರಗಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ಜ. 26ರಂದು ಬೆಳಗಾವಿಯ ನಂದಗಡದಲ್ಲಿ ರಾಜ್ಯ ಮಟ್ಟದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಮಾರಂಭ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಹೆಚ್.ಎಸ್. ಸೋಂಪೂರ ಹೇಳಿದರು.
ಶುಕ್ರವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಧಾರವಾಡದ ರೇವಣಸಿದ್ದೇಶ್ವರ ಪೀಠದ ಶ್ರೀ ಬಸವರಾಜ ದೇವರು, ರಾಜಗುರು ಮಡಿವಾಳ ಮಹಾಸ್ವಾಮಿಗಳು, ಚನ್ನವೀರ ದೇವರು ದಿವ್ಯ ಸಾನ್ನಿಧ್ಯ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭುವನೇಶ್ವರಿ ಭಾವಚಿತ್ರ ಅನಾವರಣಗೊಳಿಸುವರು, ವಿಧಾನ ಪರಿಷತ್ ಶಾಸಕ ಚನ್ನರಾಜ ಹಟ್ಟಿಹೊಳಿ ತಾಯಿ ಚನ್ನಮ್ಮ ಭಾವಚಿತ್ರ ಅನಾವರಣಗೊಳಿಸುವರು. ಶಾಸಕ ದೊಡ್ಡನಗೌಡ ಪಾಟೀಲ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅನಾವರಣಗೊಳಿಸುವರು ಎಂದು ತಿಳಿಸಿದರು.
ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳ್ಳಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ಪ್ರತಿಷ್ಠಾನದಿಂದ ಕಳೆದ 16 ವರ್ಷಗಳಿಂದ ರಾಯಣ್ಣ ಹುತಾತ್ಮ ದಿನಾಚರಣೆ ಆಚರಿಸುತ್ತಾ ಬಂದಿದ್ದು, ಈ ವರ್ಷ ಇನ್ನೂ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಹಿಂದಿನ ಸರ್ಕಾರ ಆದೇಶ ಹೊರಡಿಸಿದಂತೆ ಆಗಸ್ಟ್ 15 ಹಾಗೂ ಜನವರಿ 26ರಂದು ಎಲ್ಲ ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಗಿತ್ತು. ಅದು ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಹೇಳಿದರು.
ಅಹಿಂದ ನಾಯಕಿ ಭಾಗ್ಯಶ್ರೀ ಬಾಬಣ್ಣ ಮಾತನಾಡಿ, ರಾಜ್ಯಮಟ್ಟದ ಈ ಕಾರ್ಯಕ್ರಮಕ್ಕೆ ಎಲ್ಲಾ ಜಿಲ್ಲೆಯಿಂದ ಹೆಚ್ಚಿನ ಜನರು ಆಗಮಿಸಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶೇಖಣ್ಣ ಕಾಳೆ, ಹೇಮಂತ, ನಾಗರಾಜು ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಜ್ಞರ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಬಿ.ಎಸ್. ಪಾಟೀಲರಿಗೆ ರಾಜ್ಯ ಮಟ್ಟದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರಶಸ್ತಿ ನೀಡಲಾಗುವುದು ಎಂದು ಹೆಚ್.ಎಸ್. ಸೋಂಪೂರ ತಿಳಿಸಿದರು.



