ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ತೋಂ. ಸಿದ್ಧೇಶ್ವರ ಕಾಲೇಜಿನ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟವು ಇತ್ತೀಚೆಗೆ ಜರುಗಿತು.
ತೋಂಟದಾರ್ಯ ಪ್ರೌಢಶಾಲೆಯ ಶಿಕ್ಷಕ ಕೆ.ಎಂ. ಗೌಡರ ಮಾತನಾಡಿ, ವಿದ್ಯಾರ್ಥಿಗಳು ಸೋಲು-ಗೆಲುವಿನ ಕಡೆಗೆ ಗಮನ ಕೊಡದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾ ಮನೊಭಾವನೆ ಬೆಳೆಸಿಕೊಳ್ಳಬೇಕು. ಆತ್ಮವಿಶ್ವಾಸ ಮತ್ತು ಮಾನಸಿಕ ಶಕ್ತಿ ಹೆಚ್ಚಿಸಿಕೊಳ್ಳಲು ಕ್ರೀಡೆಗಳು ದಿವ್ಯೌಷಧವಾಗಿವೆ ಎಂದರು.
ತೋಂಟದಾರ್ಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎನ್.ವ್ಹಿ. ಗಾಳಿ ಮಾತನಾಡಿ, ಶಿಕ್ಷಣದ ಜೊತೆಗೆ ಕ್ರೀಡೆಗಳಂತಹ ಪಠ್ಯೇತರ ಚಟುವಟಿಕೆಗಳಿದ್ದಾಗ ಮಾತ್ರ ಪರಿಪೂರ್ಣ ಶಿಕ್ಷಣ ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಾಯ್.ಎಸ್. ಮತ್ತೂರ ಮಾತನಾಡಿ, ಕ್ರೀಡೆಯಿಂದ ವ್ಯಕ್ತಿತ್ವ ವಿಕಸನಗೊಂಡು ಜೀವನದಲ್ಲಿ ದೈಹಿಕ ಕ್ಷಮತೆ ಹಾಗೂ ಯಶಸ್ಸು ಸಾಧಿಸಬಹುದಾಗಿದೆ. ಕ್ರೀಡಾಳುಗಳು ಕ್ರೀಡೆಯನ್ನು ಗೌರವಿಸಬೇಕು, ಜೊತೆಗೆ ಸಮಯ ಪಾಲನೆಗೆ ಆದ್ಯತೆ ನೀಡಬೇಕು ಎಂದರು.
ರಾಜಶೇಖರ ದಳವಾಯಿ ಹಾಗೂ ಸಂಗಡಿಗರು ಕ್ರೀಡಾಜ್ಯೋತಿ ಬೆಳಗಿಸಿದರು. ದೈಹಿಕ ಶಿಕ್ಷಕರಾದ ಎಫ್.ಆರ್. ದೊಡ್ಡಣ್ಣವರ, ನಾಗರಾಜ ತಳವಾರ, ಕಾಲೇಜಿನ ಕ್ರೀಡಾ ಕಾರ್ಯಾಧ್ಯಕ್ಷರಾದ ಶಿಲ್ಪಾ ಪಾಟೀಲ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿಗಳಾದ ನಗೀನಾ ನದಾಫ್, ಅಯುಬ ಸೊರಟುರ, ಯಲ್ಲಪ್ಪ ಬಡಪ್ಪನವರ ಹಾಜರಿದ್ದರು.
ನಯನಾ ಅಳವಂಡಿ ವಚನ ಪ್ರಾರ್ಥನೆ ಹಾಡಿದರು. ಉಪನ್ಯಾಸಕರಾದ ಅಮಿತ ಭುವಾ ಸ್ವಾಗತಿಸಿದರು, ಕವಿತಾ ಚಿಕ್ಕನರಗುಂದ ನಿರೂಪಿಸಿದರು. ರಾಧಾ ಕಿಲಾರಿ ವಂದಿಸಿದರು.