ವಿಜಯಸಾಕ್ಷಿ ಸುದ್ದಿ, ಗದಗ: ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಎಂದು ಕರೆದುಕೊಳ್ಳುತ್ತಿರುವ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ, ಪೀಠಕ್ಕೆ ಸಂಬಂಧಿಸಿದ ಯಾವುದೇ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿಲ್ಲ ಎಂದು ಅಂಬಿಗರ ಸಮಾಜದ ಮುಖಂಡ ಬಿ.ಜಿ. ಸುಣಗಾರ ಆರೋಪಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳ ಮುಖ್ಯವಾಗಿ ಗದ್ದುಗೆಗೆ ಹೋಗುವುದಿಲ್ಲ. ಅಂಬಿಗರ ಚೌಡಯ್ಯನವರ ವಚನಗಳನ್ನು ಹಳ್ಳಿ ಹಳ್ಳಿಗೂ ತಲುಪಿಸುವ ಕೆಲಸ ಆಗಿಲ್ಲ. ಅಂಬಿಗರ ಸಮುದಾಯಕ್ಕೆ ಬಹುದೊಡ್ಡ ಇತಿಹಾಸ, ಧರ್ಮ ಇದೆ. ಆ ಬಗ್ಗೆ ಅಧ್ಯಯನ ನಡೆಸಿ, ಸಮಾಜಕ್ಕೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿಲ್ಲ. ಇಂಥ ಶ್ರೀಗಳಿಂದ ಸಮಾಜ ಪ್ರಗತಿ ಕಾಣುವುದು ಹೇಗೆ ಎಂದು ಪ್ರಶ್ನಿಸಿದರು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಸಂಸ್ಥಾಪಕ ಅಧ್ಯಕ್ಷನಾಗಿ ನಾನು ಸಂಘಟನೆ ಮಾಡಿದ್ದೇನೆ. ಸಹಕಾರಿ ತತ್ವದಡಿ ಟ್ರಸ್ಟ್ ನೋಂದಣಿ ಆಗಿತ್ತು. ಆದರೆ ಶ್ರೀಗಳು, ಬೈಲಾ ತಿದ್ದುಪಡಿ ಮಾಡಿ, ಶ್ರೀಮಠವನ್ನು ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಗುರುಪೀಠದ ಸಂದರ್ಭದಲ್ಲಿ ಸದಸ್ಯತ್ವವೂ ಇಲ್ಲದ ವ್ಯಕ್ತಿಯೊಬ್ಬನನ್ನು ಸಂಸ್ಥಾಪಕ ಎನ್ನುವ ರೀತಿ ಬಿಂಬಿಸಿದ್ದಾರೆ. ಇಂಥವರಿಂದ ಸಮಾಜ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಬ್ರಹ್ಮಶ್ರೀ ರಾಜು ಗುರುಸ್ವಾಮೀಜಿ ಮಾತನಾಡಿ, ಅಂಬಿಗರ ಸಮಾಜ ಬಹುದೊಡ್ಡ ಸಮುದಾಯ. ಬೇರೆ ಬೇರೆ ಹೆಸರಿನಿಂದ ಗುರುತಿಸಲ್ಪಡುವ ಅಂಬಿಗರ ಸಮುದಾಯಕ್ಕೆ ಸೇರಿದ 50ಕ್ಕೂ ಹೆಚ್ಚು ಮಠಾಧೀಶರಿದ್ದಾರೆ. ಆದರೆ ಶಾಂತಭೀಷ್ಮಚೌಡಯ್ಯ ಸ್ವಾಮೀಜಿಗಳು, ತಾವು ಒಬ್ಬರೇ ಅಂಬಿಗರ ಸಮಾಜದ ಜಗದ್ಗುರು ಎಂದು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಬಿಗರ ಸಮುದಾಯದ ಮುಖಂಡರಾದ ರಾಮು ಕೌದಿ, ಮಲ್ಲೇಶ ಬಾರಕೇರ, ಬಾಳಪ್ಪ ಬಾರಕೇರ ಇತರರು ಇದ್ದರು.



