ಬಿಗ್ ಬಾಸ್ ಮಾಜಿ ಸ್ಪರ್ಧಿ ರಂಜಿತ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜೀವ ಬೆದರಿಕೆ ಆರೋಪದಡಿ ರಂಜಿತ್ ಅಕ್ಕನ ಗಂಡ ಜಗದೀಶ್ ಎಂಬುವವರು ದೂರು ದಾಖಲಿಸಿದ್ದಾರೆ.
2018ರಿಂದ ಅಮೃತಹಳ್ಳಿಯ ಫ್ಲ್ಯಾಟ್ನಲ್ಲಿ ರಂಜಿತ್ ಸಹೋದರಿ ರಶ್ಮಿ ಹಾಗೂ ಅವರ ಪತಿ ಜಗದೀಶ್ ವಾಸವಿದ್ದಾರೆ. 2025ರಿಂದ ಇದೇ ಫ್ಲ್ಯಾಟ್ ನಲ್ಲಿ ಅಕ್ಕ ಭಾವನ ಜೊತೆ ರಂಜಿತ್ ವಾಸವಿದ್ದರಂತೆ. ಇದೀಗ ಮನೆ ವಿಚಾರಕ್ಕೆ ಅಕ್ಕ ತಮ್ಮನ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಳ್ಳುವ ಹಂತಕ್ಕೂ ಹೋಗಿದ್ದಾರೆ.
ಈ ಫ್ಲ್ಯಾಟ್ ರಂಜಿತ್ ಸಹೋದರಿ ರಶ್ಮಿ ಹೆಸರಲ್ಲೇ ಇದೆ ಎನ್ನಲಾಗಿದೆ. ಆದರೆ, ಮನೆ ಖರೀದಿಸಲು ನಾನೂ ಹಣ ಹಾಕಿದ್ದೆ ಎಂದು ರಂಜಿತ್ ಹೇಳಿದ್ದಾರೆ. ಇದೇ ವಿಚಾರಕ್ಕೆ ರಂಜಿತ್ ಪತ್ನಿ ಹಾಗೂ ರಶ್ಮಿ ನಡುವೆ ಜಗಳ ನಡೆದಿದೆ.
ಇದೇ ವಿಚಾರವಾಗಿ ರಂಜಿತ್ ಹಾಗೂ ಜಗದೀಶ್ ನಡುವೆ ವಾದ ವಿವಾದ ನಡೆದಿದ್ದು, ‘ಮನೆ ಬಿಟ್ಟು ಹೋಗು, ನಂದೆ ಮನೆ ಎಂದು ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ’ ಎಂಬುದಾಗಿ ಜಗದೀಶ್ ದೂರು ದಾಖಲು ಮಾಡಿದ್ದಾರೆ. ‘ನನ್ನ ಹೆಸರಲ್ಲಿ ಫ್ಲಾಟ್ ಇದೆ, ನೀವು ಮನೆ ಖಾಲಿ ಮಾಡಬೇಕು’ ಎಂದು ರಂಜಿತ್, ರಶ್ಮಿಗೆ ಹೇಳಿದ್ದಾರಂತೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಗಂಭೀರವಲ್ಲದ ಪ್ರಕರಣ ದಾಖಲು ಮಾಡಿದ್ದಾರೆ. ಫ್ಲಾಟ್ ವಿಚಾರ ಸಿವಿಲ್ ವ್ಯಾಜ್ಯ ಆಗಿದೆ. ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.