ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಸಿನಿಮಾ ಪೈರಸಿ ವಿರುದ್ಧ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಕೇಂದ್ರ ಸರ್ಕಾರದಿಂದ ಸ್ಪಂದನೆ ದೊರೆತಿದೆ. ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮ, ಆಧುನಿಕ ತಂತ್ರಜ್ಞಾನ ಬಳಸಿ ಪತ್ತೆ, ದಂಡ ಹಾಗೂ ಜೈಲು ಶಿಕ್ಷೆ, ಜೊತೆಗೆ ಪೈರಸಿ ಆ್ಯಪ್ಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿವರ ಹಂಚಿಕೊಂಡಿರುವ ಜಗ್ಗೇಶ್, ಇದು ವೈಯಕ್ತಿಕವಾಗಿ ಹಾಗೂ ಭಾರತೀಯ ಚಿತ್ರರಂಗದ ಪರವಾಗಿ ಸಂತೋಷದ ವಿಚಾರ ಎಂದು ಹೇಳಿದ್ದಾರೆ. ಆದರೆ, ಪೈರಸಿ ವಿರುದ್ಧ ಹೋರಾಟದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಸದಸ್ಯರಿಂದ ಬೆಂಬಲ ಸಿಗದಿರುವುದು ತಮ್ಮನ್ನು ನೋಯಿಸಿದೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ.
ಪೈರಸಿಯಿಂದಾಗಿ ಇತ್ತೀಚೆಗೆ ಬಿಡುಗಡೆಯಾದ ‘ದಿ ಡೆವಿಲ್’, ‘ಮಾರ್ಕ್’, ‘45’ ಸೇರಿದಂತೆ ಹಲವು ಸಿನಿಮಾಗಳು ನಷ್ಟ ಅನುಭವಿಸಿದ್ದವು. ಈ ಹಿಂದೆ ನಟ ಕಿಚ್ಚ ಸುದೀಪ್ ಸಹ ಪೈರಸಿ ವಿರುದ್ಧ ಸಾರ್ವಜನಿಕವಾಗಿ ಕಿಡಿಕಾರಿದ್ದರು.
ಜಗ್ಗೇಶ್ ಅವರ ಈ ಹೋರಾಟಕ್ಕೆ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



