ಬೆಂಗಳೂರು: ನಗರದ ಹೆಬ್ಬಗೋಡಿ ಪ್ರದೇಶದಲ್ಲಿ ಸರ್ಕಾರಿ ಜಮೀನಿನ ಅಕ್ರಮ ಶೆಡ್ ತೆರವು ವೇಳೆ ಘೋಷಣೆ ಕೂಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಹಿಳೆಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮೂಲತಃ ಪಶ್ಚಿಮ ಬಂಗಾಳದವರಾದ ಹಾಗೂ ಸದ್ಯ ಆನೇಕಲ್ ತಾಲೂಕಿನ ಹುಲಿಮಂಗಲದಲ್ಲಿ ವಾಸಿಸುತ್ತಿರುವ ಸರ್ಬಾನು ಖಾತೂನ್ (25) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಕ್ರಮವಾಗಿ ನಿರ್ಮಿಸಲಾದ ಶೆಡ್‌ಗಳನ್ನು ತೆರವುಗೊಳಿಸುವ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಮಹಿಳೆಯನ್ನು ‘ಜೈ ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವಂತೆ ಪ್ರಚೋದಿಸಿದ್ದರೆಂದು ತಿಳಿದುಬಂದಿದೆ. ಈ ವೇಳೆ ಮಹಿಳೆ ‘ಜೈ ಬಾಂಗ್ಲಾ’ ಎಂದು ಘೋಷಣೆ ಕೂಗಿದ್ದು, ಬಳಿಕ ಮೂರು ಬಾರಿ ‘ಜೈ ಭಾರತ್ ಮಾತಾ ಕಿ ಜೈ’ ಎಂದು ಕೂಗಿರುವುದಾಗಿ ನ್ಯಾಯಾಲಯದ ಮುಂದೆ ವಿವರಿಸಲಾಗಿದೆ.
ಪ್ರಕರಣದ ಸನ್ನಿವೇಶ ಮತ್ತು ಸತ್ಯಾಸತ್ಯತೆಗಳನ್ನು ಪರಿಗಣಿಸಿದ ನ್ಯಾಯಾಲಯ, ಅರ್ಜಿದಾರೆಗೆ ಇಬ್ಬರು ಅಪ್ರಾಪ್ತ ಮಕ್ಕಳು ಇದ್ದು ಅವರ ಪಾಲನೆ ಜವಾಬ್ದಾರಿ ಇರುವುದನ್ನೂ ಗಮನಿಸಿ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯ ವಿಧಿಸಿದ ಷರತ್ತುಗಳ ಪ್ರಕಾರ, ಮಹಿಳೆ ₹1 ಲಕ್ಷ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಸ್ಥಳೀಯ ಶ್ಯೂರಿಟಿ ಒದಗಿಸಬೇಕು. ಜೊತೆಗೆ, ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಬಾರದು ಹಾಗೂ ವಿಚಾರಣಾ ನ್ಯಾಯಾಲಯದ ಎಲ್ಲಾ ದಿನಾಂಕಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ ಎಂದು ಸೂಚಿಸಲಾಗಿದೆ.
ಈ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಜಾಮೀನು ರದ್ದುಪಡಿಸಲು ಪ್ರಾಸಿಕ್ಯೂಷನ್‌ಗೆ ಅವಕಾಶವಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.



