ಬೆಂಗಳೂರು:- “ಕರಿಯ ಕುಮಾರಸ್ವಾಮಿ” ಎಂಬ ಪದ ಬಳಸಿದ ಜಮೀರ್ ಕೂಡಲೇ
ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಈ ಬಗ್ಗೆ X ಮಾಡಿರುವ ಜೆಡಿಎಸ್, ಜಮೀರ್ ಅಹ್ಮದ್ ಅವರೇ, ಹೆಚ್.ಡಿ ಕುಮಾರಸ್ವಾಮಿ ಅವರು ಜಾತಿ, ಪಂಥ ಮತ್ತು ಬಣ್ಣದಿಂದ ಜನನಾಯಕರಾಗಿ ಬೆಳೆದಿಲ್ಲ. ಅವರ ನಾಯಕತ್ವ ಗುಣ, ಸಮಾಜಕ್ಕೆ ಮತ್ತು ಸಮುದಾಯಗಳ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆಗಳು, ಜನಪರ ಯೋಜನೆಗಳು ಮತ್ತು ಉತ್ತಮವಾದ ಆಡಳಿತ ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಕೋನದಿಂದಲೇ ಉತ್ತಮ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.
ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ನೀವು ಕ್ಷುಲ್ಲಕ ರಾಜಕೀಯಕ್ಕಾಗಿ ದ್ವೇಷ ಹರಡಲು, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದೀರಿ.
ನೆನಪಿರಲಿ, ಇಲ್ಲಿ ನಿಮ್ಮ ಒಡೆದು ಆಳುವ ನೀತಿಗೆ ಜಾಗವಿಲ್ಲ. ಜನಾಂಗೀಯ ನಿಂದನೆ, ವರ್ಣಭೇದ ಹೇಳಿಕೆಗಳನ್ನು ನೀಡಿ ಅಪಮಾನ ಎಸಗಿರುವ ನೀವು ನಾಡಿನ ಜನರಲ್ಲಿ ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.