ಚಿತ್ರರಂಗದಲ್ಲಿ ಏನಾದರು ಸಾಧನೆ ಮಾಡಬೇಕು ಎಂದು ಕನಸು ಕಂಡಿದ್ದ ಮರಾಠಿ, ಹಿಂದಿ ಚಿತ್ರರಂಗ ಹಾಗೂ ವೆಬ್ ಸೀರಿಸ್‌ಗಳಲ್ಲಿ ಗುರುತಿಸಿಕೊಂಡಿದ್ದ ಯುವ ನಟ ಸಚಿನ್ ಚಂದ್ವಾಡೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಕೇವಲ 25 ವರ್ಷವಷ್ಟೇ ಆಗಿತ್ತು.
ಸಚಿನ್ ಚಂದ್ವಾಡೆ ಅವರ ಮೃತದೇಹ ಪುಣೆಯ ಅವರದ್ದೇ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಚಿನ್ ಅವರನ್ನು ನೋಡಿದ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಚಿನ್ ಚಂದ್ವಾಣೆ ಕೊನೆಯುಸಿರೆಳೆದಿದ್ದಾರೆ.
ಅಕ್ಟೋಬರ್ 23, 2025 ರಂದು ಪುಣೆಯ ತಮ್ಮದೇ ಫ್ಲಾಟ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಚಿನ್ ಚಂದ್ವಾಡೆ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು. ಈ ವೇಳೆ ಅವರ ಕುಟುಂಬಸ್ಥರು ಆಗಮಿಸಿ, ಅವರನ್ನು ಕಾಪಾಡಿ, ಆಸ್ಪತ್ರೆಗೆ ದಾಖಲಿಸಿದ್ದರು. ಮೊದಲು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ, ಅವರ ಸ್ಥಿತಿ ಹದಗೆಟ್ಟಿತು. ಈ ವೇಳೆ ಅವರನ್ನು ಧುಲೆಯ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರು ಸಚಿನ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅಕ್ಟೋಬರ್ 24ರಂದು ಮಧ್ಯಾಹ್ನ 1:30 ರ ಸುಮಾರಿಗೆ ಚಿಕಿತ್ಸೆ ನಡೆಯುತ್ತಿರುವಾಗಲೇ ಸಚಿನ್ ಚಂದ್ವಾಡೆ ನಿಧನರಾಗಿದ್ದಾರೆ. ಇದೀಗ ಸಚಿನ್ ಚಂದ್ವಾಡೆ ಸಾವಿನ ಬಗ್ಗೆ ಅವರ ಕುಟುಂಬಸ್ಥರು ಅಧಿಕೃತ ಮಾಹಿತಿ ನೀಡಿದ್ದಾರೆ. ಸಚಿನ್ ಚಂದ್ವಾಡೆ ಅವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.


