ತಮಿಳು ಚಿತ್ರರಂಗದ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ ಪ್ರಚಾರದ ಭಾಗವಾಗಿ ಆಯೋಜಿಸಲಾದ ಆಡಿಯೋ ಲಾಂಚ್ ಕಾರ್ಯಕ್ರಮ ಈ ಬಾರಿ ವಿಶೇಷವಾಗಿ ವಿದೇಶದಲ್ಲಿ ನಡೆದಿದೆ. ಮಲೇಷಿಯಾನಲ್ಲಿ ಬಲು ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮಕ್ಕೆ ಭಾರಿ ಅಭಿಮಾನಿ ಬೆಂಬಲ ದೊರೆತಿದೆ.
ಸಾಮಾನ್ಯವಾಗಿ ವಿಜಯ್ ತಮ್ಮ ಸಿನಿಮಾಗಳ ಆಡಿಯೋ ಲಾಂಚ್ ಕಾರ್ಯಕ್ರಮಗಳನ್ನು ಯೂಟ್ಯೂಬ್‌ನಲ್ಲಿ ಲೈವ್ ಮಾಡುವ ಅಥವಾ ಬಳಿಕ ಬಿಡುಗಡೆ ಮಾಡುವ ಪರಿಪಾಟಿ ಹೊಂದಿದ್ದಾರೆ. ಆದರೆ ಈ ಬಾರಿ ಚಿತ್ರತಂಡ ಸಂಪೂರ್ಣವಾಗಿ ವಿಭಿನ್ನ ನಿರ್ಧಾರ ಕೈಗೊಂಡಿದೆ. ‘ಜನ ನಾಯಗನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡದೇ, ಒಟಿಟಿಗೆ ಮಾರಾಟ ಮಾಡಲಾಗಿದೆ.
ನಿರ್ಮಾಣ ಸಂಸ್ಥೆ ಕೆವಿಎನ್, ಕಾರ್ಯಕ್ರಮದ ಡಿಜಿಟಲ್ ಹಕ್ಕುಗಳನ್ನು ಜೀ5 ಒಟಿಟಿಗೆ ಒಪ್ಪಿಸಿದ್ದು, ಜನವರಿ 4ರಂದು ಕಾರ್ಯಕ್ರಮ ಸ್ಟ್ರೀಮ್ ಆಗಲಿದೆ. ದೊಡ್ಡ ಮೊತ್ತಕ್ಕೆ ಈ ಡೀಲ್ ಆಗಿದೆ ಎನ್ನಲಾಗುತ್ತಿದ್ದು, ವಿಜಯ್ ಸಿನಿಮಾಗಳಲ್ಲಿ ಇದು ಹೊಸ ಪ್ರಯೋಗ ಎನ್ನಬಹುದು.
ಮಲೇಷಿಯಾನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಜಯ್ ತಮ್ಮ ಅಭಿಮಾನಿಗಳ ಬಗ್ಗೆ ಭಾವುಕವಾಗಿ ಮಾತನಾಡಿದರು.
“ನಾನು ಮರಳಿನಲ್ಲಿ ಮನೆ ಕಟ್ಟಲು ಬಂದೆ. ಆದರೆ ಅಭಿಮಾನಿಗಳು ನನಗೆ ಕೋಟೆಯನ್ನೇ ಕಟ್ಟಿದ್ದಾರೆ. ಅವರಿಗಾಗಿ ನಾನು ಏನನ್ನೂ ಕೊಟ್ಟಿಲ್ಲ ಅನ್ನೋ ಬೇಸರ ಇದೆ. ಹಾಗಾಗಿ ಮುಂದಿನ ಮೂವತ್ತು ವರ್ಷ ನಾನು ನನ್ನ ಅಭಿಮಾನಿಗಳಿಗಾಗಿ ದುಡಿಯುತ್ತೇನೆ. ಅವರು ತಮ್ಮ ಎಲ್ಲವನ್ನೂ ನನಗೆ ಕೊಟ್ಟಿದ್ದಾರೆ, ಅದಕ್ಕಾಗಿ ನಾನು ಸಿನಿಮಾವನ್ನೇ ಬಿಟ್ಟುಕೊಟ್ಟಿದ್ದೇನೆ” ಎಂದು ವಿಜಯ್ ಹೇಳಿದ್ದಾರೆ.
ಇದೇ ವೇದಿಕೆಯಲ್ಲಿ ವಿಜಯ್ ಹಾಡು ಹಾಡಿ, ಡ್ಯಾನ್ಸ್ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು. ಕಾರ್ಯಕ್ರಮದ ಈ ಕ್ಷಣಗಳನ್ನು ಈಗ ಜೀ5 ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದಾಗಿದೆ ಎಂಬ ಮಾಹಿತಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.



