ದಳಪತಿ ವಿಜಯ್ ರಾಜಕೀಯ ಪ್ರವೇಶದತ್ತ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲೇ, ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ ‘ಜನ ನಾಯಗನ್’ ಸೆನ್ಸಾರ್ ವಿವಾದದ ಸುಳಿಯಲ್ಲಿ ಸಿಲುಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಡಿಸೆಂಬರ್ 18ರಂದು ಕೆವಿಎನ್ ನಿರ್ಮಾಣ ಸಂಸ್ಥೆ ‘ಜನ ನಾಯಗನ್’ ಚಿತ್ರವನ್ನು ಸೆನ್ಸಾರ್ಗೆ ಸಲ್ಲಿಸಿತ್ತು. ಪರಿಶೀಲನೆ ನಡೆಸಿದ ಮಂಡಳಿ ಒಟ್ಟು 27 ಕಟ್ ಹಾಗೂ ಬದಲಾವಣೆ ಸೂಚನೆ ನೀಡಿತ್ತು. ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸಿ ಚಿತ್ರವನ್ನು ಮರುಸಲ್ಲಿಕೆ ಮಾಡಿದರೂ, ಈ ಬಾರಿ ಪ್ರಮಾಣಪತ್ರ ನೀಡಲು ಮಂಡಳಿ ನಿರಾಕರಿಸಿದ್ದು, ವಿಶೇಷ ಮಂಡಳಿ ವೀಕ್ಷಣೆಗಾಗಿ ಶಿಫಾರಸು ಮಾಡಿದೆ.
ಸೆನ್ಸಾರ್ ಮಂಡಳಿಯಿಂದ ಸ್ಪಷ್ಟ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆ ಚಿತ್ರತಂಡ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಬೆಳವಣಿಗೆಗಳ ಮಧ್ಯೆ, ವಿಜಯ್ ರಾಜಕೀಯ ಪ್ರವೇಶದ ಕಾರಣಕ್ಕೆ ಉದ್ದೇಶಪೂರ್ವಕ ವಿಳಂಬ ನಡೆಯುತ್ತಿದೆಯೇ? ಎಂಬ ಅನುಮಾನಗಳು ಕೂಡ ವ್ಯಕ್ತವಾಗಿವೆ.
ಈ ಎಲ್ಲಾ ಬೆಳವಣಿಗೆಗಳ ವಿರುದ್ಧ ಕೆವಿಎನ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ. ಜನವರಿ 9ರಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣದಿಂದ ‘ಜನ ನಾಯಗನ್’ ಬಿಡುಗಡೆಗೂ ಮೊದಲೇ ಮುಂಗಡ ಟಿಕೆಟ್ ಬುಕಿಂಗ್ ಮೂಲಕ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿತ್ತು. ಆದರೆ, ರಿಲೀಸ್ ಮುಂದೂಡಿಕೆಯ ಹಿನ್ನೆಲೆಯಲ್ಲಿ, ಈಗ ಪ್ರೇಕ್ಷಕರಿಗೆ ಹಣ ಹಿಂತಿರುಗಿಸುವ ಸವಾಲು ಚಿತ್ರತಂಡದ ಮುಂದಿದೆ.
ಒಂದೊಮ್ಮೆ ಎಲ್ಲ ಅಡೆತಡೆಗಳು ವಾರದೊಳಗೆ ನಿವಾರಣೆಯಾದರೆ, ಜನವರಿ 14ರಂದು ‘ಜನ ನಾಯಗನ್’ ತೆರೆಗೆ ಬರಬಹುದು ಎಂಬ ನಿರೀಕ್ಷೆಯಿದೆ. ಆದರೆ, ಸೆನ್ಸಾರ್ ಮತ್ತು ರಾಜಕೀಯ ಗೊಂದಲಗಳು ಮುಂದುವರಿದರೆ, ರಿಲೀಸ್ ಇನ್ನಷ್ಟು ಮುಂದೂಡುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ.



