ಧಾರವಾಡ:- ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕೈಗೊಂಡಿರುವ ಜನಾಕ್ರೋಶ ಯಾತ್ರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕಾಂಗ್ರೆಸ್ ವಿರುದ್ಧ ಅಲ್ಲ, ಮೋದಿ ವಿರುದ್ಧ ಎಂದು ಟೀಕಿಸಿದರು.
ಬಿಜೆಪಿಯವರು ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರು ಇನ್ನೂ ಗೊಂದಲದಲ್ಲೇ ಇದ್ದಾರೆ. ಇಡೀ ದೇಶದಲ್ಲಿ ಒಟ್ಟಾರೆ ಬೆಲೆ ಏರಿಕೆಗೆ ಮೋದಿಯವರೇ ಕಾರಣ. ಆದರೆ, ಬಿಜೆಪಿಯವರಿಗೆ ಅವರ ಹೆಸರು ಹೇಳಲು ಬರುತ್ತಿಲ್ಲ. ಅದಕ್ಕೇ ಕಾಂಗ್ರೆಸ್ ಹೆಸರು ಹೇಳಿ ಕರ್ನಾಟಕದಲ್ಲಿ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಅವಧಿಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ ಎಂಬುದರ ಬಗ್ಗೆ ಇವರು ಶೇಕಡಾವಾರು ಮಾತನಾಡಲಿ. ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.