ಜನಪದ ಕಲೆ ಮರೆಯಾಗುತ್ತಿದೆ : ಶಂಕರಣ್ಣ ಸಂಕಣ್ಣವರ

0
Janapada Bhabhava lecture series
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ನಮ್ಮ ಪೂರ್ವಜರು ತಮ್ಮ ಕಾಯಕದೊಂದಿಗೆ ಜನಪದ ಹಾಡುಗಳನ್ನು ಹಾಡುತ್ತಿದ್ದರು. ಈ ಜನಪದಲ್ಲಿದ್ದ ಸಂಸ್ಕಾರಯುತ ನೀತಿ ಪಾಠಗಳು ಸಮಾಜವನ್ನು ಜಾಗೃತಿಗೊಳಿಸುತ್ತಿದ್ದವು.

Advertisement

ಆದರೆ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಬೆಳವಣಿಗೆಯಿಂದ ಕಾಯಕವಿಲ್ಲದೇ ಜನಪದ ಕಲೆ ಮರೆಯಾಗುತ್ತಿದೆ ಎಂದು ಬೆಂಗಳೂರು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಶಂಕರಣ್ಣ ಸಂಕಣ್ಣವರ ವಿಷಾದಿಸಿದರು.

ಇಲ್ಲಿಯ ನುಲಿ ಚಂದಯ್ಯ ಜಾನಪದ ಕಲಾ ಮೇಳವು ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಜನಪದ ವೈಭವ ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೂರ್ವಜರು ಬಿತ್ತುವಾಗ, ರಾಶಿ ಮಾಡುವಾಗ, ಬೀಸುವಾಗ, ಕುಟ್ಟುವಾಗ ಹಾಡುತ್ತಾ ಚಟುವಟಿಕೆಯಿಂದ ಕಾಯಕ ನಿರತರಾಗುತ್ತಿದ್ದರು. ಈಗ ರಸ್ತೆಯಲ್ಲಿ ಯಂತ್ರದ ಮೂಲಕ ರಾಶಿ ಮಾಡುವಾಗ ಕಾಯಕವೇ ಇಲ್ಲವಾಗಿದ್ದು, ಜಾನಪದ ಹಾಡುಗಳು ಮರೆಯಾಗುತ್ತಿವೆ. ಈ ಸಾಹಿತ್ಯದಲ್ಲಿ ಮಕ್ಕಳಿಂದ ವೃದ್ಧರವರೆಗೂ ನೀತಿ ಪಾಠಗಳಿವೆ ಎಂದರು.

ಜಂತ್ಲಿಶಿರೂರ ಗ್ರಾಮದ ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಉಪನ್ಯಾಸ ನೀಡುತ್ತಾ, ಜನಪದ ಕಲಾವಿದರಿಗೆ ವಿಜಯನಗರ ಸಾಮ್ರಾಜ್ಯದಲ್ಲಿಯೇ ಗೌರವವಿತ್ತು. ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಕಟ್ಟಿಕೊಡುವ ಶಕ್ತಿ ಜಾನಪದ ಕಲೆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲಿನಿಂದ ದೂರವಿದ್ದು, ಜನಪದ ಕಲೆಯತ್ತ ಗಮನ ಹರಿಸಿ. ನಮ್ಮ ಜಿಲ್ಲೆಯವರೇ ಜಾನಪದ ಅಕಾಡೆಮಿಯ ಸದಸ್ಯರಾಗಿದ್ದು ತಮಗೆಲ್ಲಾ ಮಾರ್ಗದರ್ಶನ ಮಾಡುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವೈ.ಎಚ್. ತೆಕ್ಕಲಕೋಟಿ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲೆಯು ಮುಳುಗಬಾರದು. ಈಗಿರುವ ಪೀಳಿಗೆಯು ಈ ಕಲೆಯನ್ನು ಕಲಿತು ಮುಂದಿನ ಪೀಳಿಗೆಗೂ ಕಲಿಸಬೇಕು ಎಂಬ ಸದುದ್ದೇಶದಿಂದ ನುಲಿ ಚಂದಯ್ಯ ಜಾನಪದ ಕಲಾ ಮೇಳವು ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.

ಜಾನಪದ ಅಕಾಡೆಮಿ ಪುರಸ್ಕೃತ ಬಸವರಾಜ ಹಡಗಲಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಕಲಾವಿದರು ಜಾನಪದ ಹಾಡುಗಳೊಂದಿಗೆ ವಿದ್ಯಾರ್ಥಿಗಳ ಮನರಂಜಿಸಿದರು. ಕಲಾವಿದ ಗೌಡಪ್ಪ ಬೊಮ್ಮಪ್ಪನವರ ಬಸನಗೌಡ ಪಾಟೀಲ ವೇದಿಕೆಯಲ್ಲಿದ್ದರು. ಅಶೋಕ ಕಳಸದ ಸ್ವಾಗತಿಸಿದರು. ಎಸ್.ಎಚ್. ಶೆಟ್ಟಿನಾಯ್ಕರ ನಿರೂಪಿಸಿದರು. ನುಲಿ ಚಂದಯ್ಯ ಜಾನಪದ ಕಲಾ ಮೇಳದ ಅಧ್ಯಕ್ಷ ಶಿವು ಭಜಂತ್ರಿ ವಂದಿಸಿದರು.

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಬಸವರಾಜ ಹಡಗಲಿ ಮಾತನಾಡಿ, ಸಂತ ಶರಣರು ತಮ್ಮ ಸಂತೋಷಕ್ಕಾಗಿ ವಚನ, ತತ್ವ ಪದಗಳನ್ನು ರಚಿಸಿ ಹಾಡಿಲ್ಲ. ಈ ಸಮಾಜದ ಅಂಕು-ಡೊಂಕು ತಿದ್ದಲು ಹಾಡಿನ ಮೂಲಕ ಜಾಗೃತಿ ಮೂಡಿಸಿದ್ದಾರೆ. ಕೇವಲ ತಾತ್ಕಾಲಿಕ ಖುಷಿ ಕೊಡುವ ಈಗಿನ ನವ್ಯ ಗೀತೆಗಳಿಗೆ ಮಾರು ಹೋಗದೇ ನಮ್ಮ ಸಂಸ್ಕೃತಿಯನ್ನು ಬೆಳಗಿಸುವ ಗೀಗೀ ಪದ, ತತ್ವ ಪದ, ಜಾನಪದ ಪದ, ಶೋಬಾನ ಪದ, ಹಂತಿ ಪದಗಳನ್ನು ಕಲಿತು ಉಳಿಸಬೇಕಾಗಿದ್ದು, ಶಾಲಾ ಶಿಕ್ಷಣದಲ್ಲಿ ಜಾನಪದ ಪಠ್ಯವನ್ನು ಸೇರ್ಪಡೆಗೊಳಿಸಿದ್ದು ಸಂತಸ ತಂದಿದೆ ಎಂದರು.


Spread the love

LEAVE A REPLY

Please enter your comment!
Please enter your name here