ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ರಂಗ ಸಾಮ್ರಾಟ ಸಾಂಸ್ಕೃತಿಕ, ಶೈಕ್ಷಣಿಕ, ಮತ್ತು ಕ್ರೀಡಾ ಸಂಶೋಧನಾ ಸಂಸ್ಥೆ ಏರ್ಪಡಿಸಿದ್ದ ಧಾರವಾಡ ಜನಪದ ಉತ್ಸವದಲ್ಲಿ ಸಿರಿಗಂಧ ಕಲಾತಂಡಕ್ಕೆ `ಜನಪದ ಸಿರಿ ಪ್ರಶಸ್ತಿ 2024′ ಪ್ರದಾನ ಮಾಡಲಾಯಿತು.
ಪ್ರಶಸ್ತಿಯನ್ನು ಸಿರಿಗಂಧ ಸಂಸ್ಥೆಯ ಅಧ್ಯಕ್ಷ ಪ್ರಕಾಶ.ಎಚ್ ಕಂಬಳಿ ಮತ್ತು ಕಾರ್ಯದರ್ಶಿ ಜಯಲಕ್ಷ್ಮಿ ಎಚ್. ಮತ್ತು ತಂಡದವರು ಸ್ವೀಕರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ನೃತ್ಯ ನಿರ್ದೇಶಕ ಎ.ಎಂ. ಸೈಯದ ಮತನಾಡಿ, ಜನಪದ ಜನರ ಬಾಯಿಂದ ಬಾಯಿಗೆ ಹರಿದು ಬಂದಿದ್ದು, ನಮ್ಮ ಸಮೂಹ ಜವಾಬ್ದಾರಿ ವಹಿಸಿ ಜನಪದದ ಉಳಿವಿಗೆ ಶ್ರಮಿಸಬೇಕಿದೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವ ಜಾನಪದ ಸಾಹಿತ್ಯ ಸಂಸ್ಕೃತಿಯ ಎಲ್ಲ ನೆಲೆಗಳಲ್ಲೂ ವ್ಯಾಪಿಸುವ ಅವಶ್ಯಕತೆಯಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಸಿರಿಗಂಧ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಎಚ್.ಕಂಬಳಿ ಮಾತನಾಡುತ್ತಾ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜನಪದ ಕಲಾ ಸಂಪತ್ತನ್ನು ಉಳಿಸಿ-ಬೆಳೆಸುವ ಕಾರ್ಯ ಸಂಘ-ಸಂಸ್ಥೆಗಳಿಂದ ಆಗಬೇಕು. ಈ ನಿಟ್ಟಿನಲ್ಲಿ ರಂಗ ಸಾಮ್ರಾಟ ಸಂಸ್ಥೆ ಜನಪದ ಕಲಾವಿದರನ್ನು ಸಂನ್ಮಾನಿಸುತ್ತಿರುವುದು ಜಾನಪದ ಕಲೆಯ ಉಳಿವಿಗೆ ಶ್ರಮಿಸುತ್ತಿರುವ ನಮ್ಮಂತ ಅನೇಕ ಕಲಾವಿದರಿಗೆ ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಬಾಳಪ್ಪ ಚಿನಗುಡಿ, ಜನರಿಗೆ ಆದರ್ಶಗಳನ್ನೂ ಸಹ ಕಲಿಯುವ ಅನಿವಾರ್ಯತೆ ಸೃಷ್ಟಿಸಬೇಕಾದ ಕಾಲ ಬಂದಿರುವುದು ದುರ್ದೈವ. ಜಾನಪದ ಕಲೆಗಳನ್ನು ಜನರಿಗೆ ತಿಳಿ ಹೇಳುವುದರ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಎಫ್.ಬಿ. ಕಣವಿ, ಪ್ರಮೀಳಾ ಜಕ್ಕಣ್ಣವರ್, ಆಫ್ರೀನ್ಬಾನು ಜಕಾತಿ, ಅಲ್ಲಾಬಕ್ಷ ಮಕಾಂದಾರ, ಮಲ್ಲನಗೌಡ ಪಾಟೀಲ್, ಚಿದಾನಂದ ಭಜಂತ್ರಿ ಉಪಸ್ಥಿತರಿದ್ದರು. ರಂಗ ಸಾಮ್ರಾಟ ಸಂಸ್ಥೆಯ ಕಾರ್ಯದರ್ಶಿ ಸಿಕಂದರ ದಂಡಿನ ಸ್ವಾಗತಿಸಿದರು. ಜಯಲಕ್ಷ್ಮಿ ಎಚ್. ನಿರೂಪಿಸಿದರು. ಶೃತಿ ಹುರುಳಿಕೊಪ್ಪ ವಂದಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ವಿವಿಧ ಜನಪದ ಕಲಾ ತಂಡಗಳಿಂದ ಜಾನಪದ ನೃತ್ಯ ಸ್ಪರ್ಧೆ ಜರುಗಿತು. ಸುಮಾರು 20 ಕಲಾ ತಂಡಗಳು ಭಾಗವಹಿಸಿದ್ದು. ಅವುಗಳಲ್ಲಿ ಕ್ವೀನ್ ಬೀಸ್ ತಂಡ ಪ್ರಥಮ, ರಾಕ್‌ಸ್ಟಾರ್ಸ್ ವುಮೆನ್ಸ್ ತಂಡ ದ್ವಿತೀಯ ಹಾಗೂ ಸಿಂಗಾರ ಸಖಿ ಬಳಗ ತೃತೀಯ ಬಹುಮಾನ ಪಡೆದರು. ಅಲ್ಲದೆ ಕವಿರತ್ನ ಕಾಳಿದಾಸ ಕಲಾ ತಂಡ ಗದಗ ಹಾಗೂ ಹಾರೋಬೆಳವಡಿ ನಿರಂಜನ ತಂಡವರು ವಿಶೇಷ ಬಹುಮಾನ ಪಡೆದರು.