ಬಳ್ಳಾರಿ: ಬ್ಯಾನರ್ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಪ್ರಕರಣ ರಾಜಕೀಯ ಕಾವು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಅವರು ಜನಾರ್ದನ ರೆಡ್ಡಿ ವಿರುದ್ಧ ತೀವ್ರ ಆರೋಪಗಳ ಸುರಿಮಳೆಗೈದಿದ್ದಾರೆ.
“ಜನಾರ್ದನ ರೆಡ್ಡಿ ಒಬ್ಬ ನೀಚ, ಹೇಡಿ ಹಾಗೂ ರಾಕ್ಷಸ. ಅವನು ಜೀವಮಾನಪೂರ್ತಿ ಇಂತಹದ್ದೇ ಕೆಲಸ ಮಾಡಿಕೊಂಡು ಬಂದಿದ್ದಾನೆ. ಅಂತಹವನಿಗೆ ಅಂತ್ಯ ಮಾಡಿಯೇ ಮಾಡ್ತೇವೆ” ಎಂದು ಭರತ್ ರೆಡ್ಡಿ ಕಿಡಿಕಾರಿದರು.
ಬ್ಯಾನರ್ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಅವರು, “ನಾವು ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಹಾಕಿಲ್ಲ. ಸಾರ್ವಜನಿಕ ರಸ್ತೆಯಲ್ಲಿ ಬ್ಯಾನರ್ ಹಾಕಲಾಗಿದೆ. ಅಕ್ರಮ ಗಣಿಗಾರಿಕೆ ವಿಷಯವನ್ನು ಮುಚ್ಚಿಹಾಕಲು ಈ ರೀತಿಯ ನೀಚ ಕೃತ್ಯ ನಡೆದಿದೆ” ಎಂದು ಆರೋಪಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ನಾನು ಯಾವುದೇ ಕೇಸ್ ಡೈವರ್ಟ್ ಮಾಡಲು ಹೋಗಲ್ಲ. ನಮ್ಮ ಕಾರ್ಯಕರ್ತನ, ತಮ್ಮನ ಸಾವಿನಿಂದ ನಾವು ನೋವಿನಲ್ಲಿದ್ದೇವೆ” ಎಂದು ಹೇಳಿದರು.
ನಾಳೆ ನಡೆಯಲಿರುವ ವಾಲ್ಮೀಕಿ ಮಹರ್ಷಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, “ಯಾವುದೇ ದುರುದ್ದೇಶ, ಎಷ್ಟೇ ಅಡ್ಡಿ ಬಂದರೂ ಕಾರ್ಯಕ್ರಮ ನಿಲ್ಲುವುದಿಲ್ಲ. ನಮ್ಮ ಅಜ್ಜನ ಕಾರ್ಯಕ್ರಮ ಅದ್ದೂರಿಯಾಗಿ ಮಾಡುತ್ತೇವೆ” ಎಂದು ಘೋಷಿಸಿದರು.
ಈ ವೇಳೆ ಪಕ್ಷದ ಬೆಂಬಲದ ಬಗ್ಗೆ ಮಾತನಾಡಿದ ಭರತ್ ರೆಡ್ಡಿ, “ರಾಜ್ಯ ನಾಯಕರು, ಹೈಕಮಾಂಡ್ ಹಾಗೂ ಡಿ.ಕೆ.ಶಿವಕುಮಾರ್ ಅವರು ನನ್ನ ಜತೆ ಮಾತನಾಡಿದ್ದಾರೆ. ಯಾವುದಕ್ಕೂ ಕುಗ್ಗಬೇಡ, ನಾವೆಲ್ಲ ನಿನ್ನ ಜತೆ ಇದ್ದೇವೆ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.
“ಬಳ್ಳಾರಿ ಶಾಂತಿಯುತ ನಗರ. ರಾಕ್ಷಸರ ಅಟ್ಟಹಾಸಕ್ಕೆ ನಾವು ಭಯಪಡುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ” ಎಂದು ಭರತ್ ರೆಡ್ಡಿ ಹೇಳಿದರು.



