ಬೆಂಗಳೂರು: ಜನಾರ್ದನ ರೆಡ್ಡಿ ಅವರು ಝೆಡ್+ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿ ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,
“ಝೆಡ್ ಭದ್ರತೆ ಆದರೂ ಕೇಳಲಿ. ಇರಾನ್ನಿಂದ ಯಾವುದಾದರೂ ಭದ್ರತೆ ತರಿಸಿಕೊಳ್ಳಲಿ, ಅಮೆರಿಕದಿಂದ ಆದರೂ ತರಿಸಿಕೊಳ್ಳಲಿ. ಇಲ್ಲವಾದರೆ ಅವರೇ ಭದ್ರತೆ ಮಾಡಿಕೊಂಡುಕೊಳ್ಳಲಿ, ಯಾರು ಬೇಡ ಎಂದಿದ್ದಾರೆ?” ಎಂದು ಲೇವಡಿ ಮಾಡಿದರು.
“ಪತ್ರ ಬರೆದಿರುವುದು ಬಹಳ ಸಂತೋಷ. ಅವರ ಪಾರ್ಟಿ ಕೇಡರ್ಸ್‌ಗಳಿಂದಲೇ ನೂರು ಜನರನ್ನು ಭದ್ರತೆಗೆ ರೆಡಿ ಮಾಡಿಕೊಂಡುಕೊಳ್ಳಲಿ” ಎಂದು ಜನಾರ್ದನ ರೆಡ್ಡಿ ವಿರುದ್ಧ ಡಿಕೆ ಶಿವಕುಮಾರ್ ಟೀಕಿಸಿದರು. ಬಳ್ಳಾರಿ ಗಲಾಟೆಯಲ್ಲಿ ಫೈರ್ ಆದ ಬುಲೆಟ್ ಸತೀಶ್ ರೆಡ್ಡಿ ಅವರ ಗನ್‌ಮ್ಯಾನ್‌ನದ್ದು ಎಂಬ ವರದಿ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ,
“ಆ ವಿಚಾರದ ಬಗ್ಗೆ ನನಗೇನೂ ಮಾಹಿತಿ ಇಲ್ಲ. ಯಾರು ತಪ್ಪು ಮಾಡಿದ್ದರೂ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು” ಎಂದರು. ಇನ್ನು ವಾಲ್ಮೀಕಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, “ಎಲ್ಲಾ ಕಡೆ ವಿಗ್ರಹಗಳನ್ನು ಇಡುತ್ತಾರೆ, ಭಕ್ತಿ ಭಾವನೆ ತೋರಿಸುತ್ತಾರೆ. ಅದಕ್ಕೆ ಅಸೂಯೆ ಯಾಕೆ? ವಾಲ್ಮೀಕಿ ಯಾವುದೋ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರು ಎಲ್ಲರ ಆಸ್ತಿ. ರಾಮಾಯಣವನ್ನು ವಾಲ್ಮೀಕಿ ಬರೆದಿದ್ದಾರೆ. ನಾವೆಲ್ಲರೂ ರಾಮಾಯಣ ಓದೋದಿಲ್ವಾ?” ಎಂದು ಪ್ರಶ್ನಿಸಿದರು.



