ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರದ ಅನುಮತಿಯ ಮೇರೆಗೆ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದ್ದು, ಹಿರಿಯ ನಾಗರಿಕರು ಈ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು. ಬಡವರ ಪಾಲಿಗೆ ಜನೌಷಧಿ ಕೇಂದ್ರವು ಸಂಜೀವಿನಿ ಇದ್ದಂತೆ ಎಂದು ಗದಗ-ಬೆಟಗೇರಿ ನಗರಸಭೆ ಮಾಜಿ ಸದಸ್ಯ ಹಾಗೂ ಜನೌಷಧಿ ಕೇಂದ್ರದ ಮಾಲಕರದ ಮಂಜುನಾಥ ಎಚ್.ಮುಳಗುಂದ ಅಭಿಪ್ರಾಯಪಟ್ಟರು.
ಇಲ್ಲಿನ ಹುಯಿಲಗೋಳ ನಾರಾಯಣರಾವ್ ವೃತ್ತದ ಬಳಿ ಇರುವ ಜನೌಷಧಿ ಕೇಂದ್ರದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ 10 ವರ್ಷದ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನ ಔಷಧಿ ಕೇಂದ್ರ ಆರಂಭ ಮಾಡಿದರು. ಇದರಿಂದ ಬಡವರು ಹಾಗೂ ಮದ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲವಾಗಿದೆ. ಜನ ಔಷಧಿ ಕೇಂದ್ರದಲ್ಲಿ ಜನ ಸಾಮಾನ್ಯರ ಕೈಗೆಟುಕುವ ದರದಲ್ಲಿ ಔಷಧಿಗಳು ದೊರಕುತ್ತವೆ ಎಂದು ಹೇಳಿದರು.
ಕ್ಯಾನ್ಸರ್, ಸಕ್ಕರೆ ಕಾಯಿಲೆ ಸೇರಿದಂತೆ ಹತ್ತು ಹಲವಾರು ದೀರ್ಘಕಾಲದ ಕಾಯಿಲೆಗಳಿಗೆ ನಿರಂತರವಾಗಿ ಔಷಧಿ ಸೇವನೆ ಮಾಡುವುದು ಅನಿವಾರ್ಯ. ಇಂತಹ ಸಂದರ್ಭದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಜನ ಔಷಧಿ ಕೇಂದ್ರದಲ್ಲಿ ಮಾತ್ರೆಗಳು ಸಿಗುತ್ತಿರುವುದು ಸಂತೋಷದ ವಿಷಯ. ಸಾರ್ವಜನಿಕರು ಜನೌಷಧಿ ಕೇಂದ್ರದ ಸಂಪೂರ್ಣ ಉಪಯೋಗವನ್ನು ಪಡೆಯಬೇಕು. ಇದರಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಆರ್ಥಿಕ ಹೊರೆಯನ್ನು ತಪ್ಪಿಸಬಹುದು ಎಂದು ಹೇಳಿದರು.
ಹಲವು ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಜನೌಷಧಿ ಕೇಂದ್ರವನ್ನು ಬೆಟಗೇರಿಯಲ್ಲಿ ಪ್ರಾರಂಭ ಮಾಡಲಾಯಿತು. ಸಾರ್ವಜನಿಕರಿಂದ ಸಾಕಷ್ಟು ಪ್ರಶಂಸೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಟಾಂಗಾಕೂಟದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಇಲ್ಲಿಯೂ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಈ ವೇಳೆ ತಜ್ಞ ವೈದ್ಯರಾದ ಡಾ. ಸಿ.ಎಸ್. ಹನುಮಂತಗೌಡ್ರ, ಪರಪ್ಪ ಕಮತರ, ಕಾರ್ತಿಕ್ ಮಾರನಬಸರಿ, ರೇಖಾ ತಳವಾರ, ವಿರುಪಾಕ್ಷಪ್ಪ ಗಾಳಪ್ಪನವರ, ಅಲ್ಲಾಸಾಬ್ ಗದುಗಿನ, ಸಕ್ಕುಬಾಯಿ ಬಾಗಲಕೋಟಿ, ನಿಂಗಮ್ಮ ಬೆಳಧಡಿ, ಪರಶುರಾಮ ನಿಲಗಾರ, ದಶರಥ ಮಿರಜಕರ್, ಶಿವಪುತ್ರಪ್ಪ ಪಟ್ಟಣಶೆಟ್ಟಿ, ಕೃಷ್ಣಮೂರ್ತಿ ಗುಡೂರ, ಶ್ರೀನಿವಾಸ ಸಿಂಗ್ ರಜಪೂತ, ಬಸವರಾಜ ಕೊತಂಬ್ರಿ, ವಸಂತ ಶೆಲೂಡಿ ಮುಂತಾದವರು ಉಪಸ್ಥಿತರಿದ್ದರು.
ಕಳೆದ 7 ವರ್ಷಗಳಿಂದ ಜನೌಷಧಿ ಕೇಂದ್ರಗಳಲ್ಲಿ ಮಾತ್ರೆಯನ್ನು ಖರೀದಿ ಮಾಡುತ್ತಿದ್ದೇನೆ. ಮಧ್ಯಮ ವರ್ಗದವರಿಗೆ ಈ ಕೇಂದ್ರ ಸಾಕಷ್ಟು ಪ್ರಯೋಜನವಾಗಿದೆ. ಕೇಂದ್ರದ ಬಗ್ಗೆ ಇನ್ನಷ್ಟು ಹೆಚ್ಚು ಪ್ರಚಾರ ಸಿಗುವ ಅವಶ್ಯಕತೆ ಇದ್ದು, ಹೆಚ್ಚು ಹೆಚ್ಚು ಜನರು ಜನೌಷಧಿ ಕೇಂದ್ರಕ್ಕೆ ಆಗಮಿಸಿ ತಮ್ಮ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಬೇಕು. ಈ ಕೇಂದ್ರದಿಂದಾಗಿ ನನ್ನ ಹಣ ಸಾಕಷ್ಟು ಉಳಿತಾಯವಾಗಿದೆ.
– ಮಂಜುನಾಥ ಶಾಂತಗೇರಿ.
ಜನೌಷಧಿ ಕೇಂದ್ರದ ಗ್ರಾಹಕ.
ಆನೌಷಧಿ ಕೇಂದ್ರದಲ್ಲಿರುವ ಮಾತ್ರೆಗಳು ಹೆಚ್ಚು ಪ್ರಯೋಜನ ಆಗುವುದಿಲ್ಲ ಎನ್ನುವ ಅಪಪ್ರಚಾರವಿದೆ. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳಷ್ಟೇ ಪರಿಣಾಮಕಾರಿಯಾಗಿ ಜನ ಔಷಧಿ ಕೇಂದ್ರದಲ್ಲಿರುವ ಔಷಧಿಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಜನ ಔಷಧಿ ಕೇಂದ್ರದಲ್ಲಿ ಔಷಧಿ ಖರೀದಿ ಮಾಡಲು ಮುಂದೆ ಬರಬೇಕು.
– ಮಂಜುನಾಥ ಮುಳಗುಂದ.
ಜನೌಷಧಿ ಕೇಂದ್ರದ ಮಾಲಕ.