ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮದು ಅಹಿಂದ ಸರ್ಕಾರ, ನಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪಸಂಖ್ಯಾತ, ಮತ್ತು ಹಿಂದುಳಿದ ವರ್ಗಗಳ ಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಕೇವಲ ನೆಪ ಮಾತ್ರದ ಮೌಖಕ ಹೇಳಿಕೆಗಳನ್ನು ನೀಡಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಈ ಅಸಹಾಯಕ ಯು ಟರ್ನ್ ಚಾಳಿಯನ್ನು ಖಂಡಿಸಿ, ಚಳಿಗಾಲದ ಅಧಿವೇಶನ ನಡೆಯುವ ಸುವರ್ಣಸೌಧಕ್ಕೆ `ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-2′ ಹಮ್ಮಿಕೊಂಡಿದ್ದೇವೆ ಎಂದು ಎಸ್‌ಡಿಪಿಐ ಪಕ್ಷದ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು. ಮುಸ್ಲಿಮರ ಮೀಸಲಾತಿಯನ್ನು ಪುನಃ ಸ್ಥಾಪಿಸಿ ಶೇ. ೮ಕ್ಕೆ ಏರಿಸಬೇಕು. ಕಾಂತರಾಜ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ವಕ್ಫ್ ಆಸ್ತಿಗಳ ರಕ್ಷಣೆ, ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದೆನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರುವ SಅP/ಖಿSP ಹಣವನ್ನು ಬೇರೆ ಯಾವುದೇ ಯೋಜನೆಗಳಿಗೆ ಬಳಸಬಾರದು. 25-26ನಾಲಿನ ಬಜೆಟ್‌ನಲ್ಲಿ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ 10 ಸಾವಿರ ಕೋಟಿ ಮೀಸಲಿಡಬೇಕು ಎಂದರು.
ಗದಗ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ ಮಾತನಾಡಿ, ಜಾಥಕ್ಕೆ ಜಿಲ್ಲೆಯ ಜನತೆ ಹಾಗೂ ವಿವಿಧ ಸಂಘಟನೆಗಳ ನಾಯಕರ ಬೆಂಬಲವನ್ನು ಯಾಚಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹಿದಾಯತುಲ್ಲಾ ಕಾಗದಗಾರ, ಕಾರ್ಯದರ್ಶಿ ಇರ್ಫಾನ್ ಗುಳಗುಂದಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಖಾಜಾ ಮೈನುದ್ದಿನ್, ಜಿಲ್ಲಾ ಸಮಿತಿ ಸದಸ್ಯರಾದ ಮುಸ್ತಾಕ್ ಕಟ್ಟಿಮನಿ, ಅನ್ವರ್ ಮುಲ್ಲಾ, ಹಸ್ಸನ್ ನಾಗನೂರ್, ಮೊಹಮ್ಮದ್ ಸಾದಿಕ್ ಶಿರಹಟ್ಟಿ, ಗದಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಫ್ಫಾನ್ ತರಫ್ದರ್, ಸಮೀರ್ ಕೊಟ್ಟೂರ್, ಇಬ್ರಾಹಿಂ ಕುಂದರಪಿ ಇನ್ನಿತರರು ಉಪಸ್ಥಿತರಿದ್ದರು.
ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಈ ಸಮುದಾಯಗಳ ಸಾಂವಿಧಾನಿಕ ಹಕ್ಕು ರಕ್ಷಣೆ ಕಾಯಿದೆ ಮತ್ತು ಯೋಜನೆಗಳಿಗಾಗಿ ಆಗ್ರಹಿಸಿ ಎಸ್‌ಡಿಪಿಐ ವತಿಯಿಂದ ಡಿ. 10ರಂದು ಉಡುಪಿಯಿಂದ ಜಾಥಾ ಪ್ರಾರಂಭವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ, ಡಿ.13ರಂದು ಗದಗ ಜಿಲ್ಲೆಗೆ ಪ್ರವೇಶಿಸಲಿದೆ. ಅಂದು, ರಾತ್ರಿ 8 ಗಂಟೆಗೆ ನಗರದ ಮುಳಗುಂದ ನಾಕಾ ಹತ್ತಿರ ಹೆಸ್ಕಾಂ ಕಛೇರಿ ಎದುರಿಗೆ ಸಮಾವೇಶ ನಡೆಯಲಿದೆ. ಮುಂದೆ ಜಾಥಾವು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಡಿ. 16ರಂದು ಬೆಳಗಾವಿಗೆ ತಲುಪುವುದು ಎಂದು ಅನ್ವರ್ ಬಾಗೇವಾಡಿ ವಿವರಿಸಿದರು.