HomeGadag Newsನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕಾಗಿದೆ : ಶರಣು ಗೋಗೇರಿ

ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕಾಗಿದೆ : ಶರಣು ಗೋಗೇರಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶಾಂತಿಯನ್ನು ಉತ್ತೇಜಿಸಲು ಮತ್ತು ಶಾಂತಿಯುತ, ಸುಸ್ಥಿರ ಜಗತ್ತಿಗೆ ಜಾಗತಿಕ ಒಗ್ಗಟ್ಟಿನ ಶಕ್ತಿಯನ್ನು ಆಚರಿಸಲು ಪ್ರತಿವರ್ಷ ಸೆಪ್ಟಂಬರ್ 21ರಂದು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಶಾಂತಿ ದಿನ ಎಂದು ಕರೆಯಲ್ಪಡುವ ಇದು ಎಲ್ಲ ಜನಾಂಗಗಳು ಮತ್ತು ಜನರನ್ನು ವಿಶ್ವ ಶಾಂತಿಯ ಪ್ರಾಮುಖ್ಯತೆಯನ್ನು ಪ್ರಚಾರ ಮಾಡಲು ಪ್ರೋತ್ಸಾಹಿಸುತ್ತದೆ. ಪ್ರಸಕ್ತ ವರ್ಷದ ವಿಶ್ವಶಾಂತಿ-ದಿನವು ಶಾಂತಿಯ ಸಂಸ್ಕೃತಿಯನ್ನು ಬೆಳೆಸುವುದು ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲ್ಪಡುತ್ತಿದೆ. ಈ ಸಂದರ್ಭದಲ್ಲಿ ಜಗತ್ತಿನ ಪ್ರತಿಯೊಂದು ದೇಶಗಳು ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕಾಗಿದೆ ಎಂದು ಯುವ ಜನ ಕ್ರೀಡಾ ಅಧಿಕಾರಿಗಳಾದ ಶರಣು ಗೋಗೇರಿ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಶಾಂತಿ ದಿನದ ಅಂಗವಾಗಿ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಶಾಂತಿಗಾಗಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನಕದಾಸ ಶಿಕ್ಷಣ ಸಮಿತಿಯ ಸಹಕಾರ್ಯದರ್ಶಿ ಡಾ. ಪುನೀತಕುಮಾರ ಬೆನಕನವಾರಿ ಮಾತನಾಡುತ್ತಾ, ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಸಂಘರ್ಷಗಳು ಕಡಿಮೆಯಾಗಲು ಶಾಂತಿಯ ವಾತಾವರಣದ ಅವಶ್ಯಕತೆಯಿದೆ. 43 ವರ್ಷಗಳ ಹಿಂದೆ ವಿಶ್ವ ಸಂಸ್ಥೆ ಸ್ಥಾಪಿಸಿದ ದಿನವು ವಿಶ್ವಕ್ಕೆ ಶಾಂತಿಯನ್ನು ಒತ್ತಿ ಹೇಳುತ್ತದೆ. ಭೌಗೋಳಿಕ, ರಾಜಕೀಯ ಉದ್ವಿಗ್ನಗಳು ನಡೆಯುತ್ತಿರುವ ಇಂದಿನ ಜಗತ್ತಿನಲ್ಲಿ ಶಾಂತಿ ದಿನ ಮಹತ್ವವನ್ನು ಪಡೆಯುತ್ತದೆ. ವಿಶ್ವದಲ್ಲಿ ಶಾಂತಿ ಸ್ಥಾಪಿಸುವಲ್ಲಿ ರೆಡ್ ಕ್ರಾಸ್ ಪಾತ್ರ ಮಹತ್ವದ್ದು ಎಂದರು.

ವಿಶ್ವಶಾಂತಿ ದಿನದ ಜಾಥಾವು 1200 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡು, ಎ.ಪಿ.ಎಂ.ಸಿ ರೋಡ್, ಬಸವೇಶ್ವರ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್ ಮುಖಾಂತರ ಗಾಂಧಿ ಸರ್ಕಲ್‌ನಿಂದ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಜಾಥಾದಲ್ಲಿ ಗದಗ ನಗರದ ಕೆ.ಎಸ್.ಎಸ್. ಕಾಲೇಜು, ಸರಕಾರಿ ಮಹಿಳಾ ಕಾಲೇಜು, ಸರಕಾರಿ ಪ್ರಥಮದರ್ಜೆ ಕಾಲೇಜು, ಪಿ.ಪಿ.ಜಿ ಕಲಾ ಮಹಾವಿದ್ಯಾಲಯ, ಕೆ.ಎಲ್.ಇ. ಕಲಾ ಮಹಾವಿದ್ಯಾಲಯ, ಪಿ.ಪಿ.ಜಿ. ಬಿಎಡ್ ಕಾಲೇಜು, ಎಚ್.ಸಿ.ಇ.ಎಸ್. ಕಾಲೇಜು, ಅಬ್ದುಲ್‌ಕಲಾಂ ಕಾಲೇಜು, ಜಿಮ್ಸ್ ನರ್ಸಿಂಗ್ ಕಾಲೇಜು, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ, ಎ.ಎಸ್.ಎಸ್. ಕಾಲೇಜು, ಜೆ.ಟಿ. ಕಾಲೇಜು, ಜೆ.ಪಿ. ಬಿಎಡ್ ಕಾಲೇಜು, ಎಮ್.ಎಮ್. ಪ್ರಥಮದರ್ಜೆ ಕಾಲೇಜಿನ ಎನ್.ಎಸ್.ಎಸ್ ಹಾಗೂ ಯುವ ರೆಡ್ ಕ್ರಾಸ್‌ನ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಡಾ. ಎಮ್.ಡಿ. ಸಮುದ್ರಿ, ಆಡಳಿತ ಮಂಡಳಿ ಸದಸ್ಯರಾದ ದ್ರಾಕ್ಷಾಯಣಿ ಮೂರಸಿಳ್ಳಿನ, ಗಣೇಶಸಿಂಗ್ ಬ್ಯಾಳಿ, ಚೆನ್ನರಡ್ಡಿ ಗೂಳರಡ್ಡಿ, ಸದಸ್ಯರು ಗೀತಾ ಗುಡೇನಕಟ್ಟಿ, ಸಂಜಯ ಬಾಗಮಾರ್ ಹಾಗೂ ಡಿಡಿಆರ್‌ಸಿ ಸಿಬ್ಬಂದಿಯವರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ ವಿಶ್ವಶಾಂತಿ ದಿನದ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಾವಿದ್ಯಾಲಯದ ಮುಖ್ಯಸ್ಥರಿಗೆ ವಿದ್ಯಾರ್ಥಿಗಳಿಗೆ ಅಭಿನಂದನೆ ತಿಳಿಸಿ, ಪ್ರತಿಯೊಬ್ಬರೂ ಈ ದಿನದಂದು ಮಾತ್ರ ಶಾಂತಿ ಭಾವವನ್ನು ಅನುಸರಿಸದೆ ಪ್ರತಿದಿನ ಶಾಂತಿ ಸೌಹಾರ್ದತೆಯಿಂದ ವರ್ತಿಸಿದರೆ ಜಗತ್ತಿನಲ್ಲಿ ಶಾಂತಿ ನೆಲಸಲು ಸಾಧ್ಯವಾಗುತ್ತದೆ. ಇದರಿಂದ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಬೆಳೆಯಲು ಸಹಾಯವಾಗುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!