ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಂಪನ ತಿರುಳ್ಗನ್ನಡ ನಾಡು, ಶಿವಭಕ್ತ ಆದಯ್ಯನ ಧಾರ್ಮಿಕ ನೆಲೆವೀಡು. ಲಕ್ಷ್ಮಣರಸನ ಸಂಪದ್ಭರಿತ ಬೀಡು, ಮೇರು ಶಿಲ್ಪಗಳ ಗೂಡು ಹೀಗೆ ಗತವೈಭವಗಳ ಇತಿಹಾಸವನ್ನು ಲಕ್ಷ್ಮೇಶ್ವರ (ಪುಲಿಗೆರೆ) ಹೊಂದಿದೆ. ಜ್ಯೋತಿರ್ಲಿಂಗದಷ್ಟೇ ಪವಿತ್ರವಾದ ಈ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮೇ 17ರಂದು ಸಂಜೆ 7ಕ್ಕೆ ರಥ ಪೂಜೆ, ಶ್ರೀ ಲಕ್ಷ್ಮಿದೇವರ ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ, ಮೇ 18ರಂದು ಮಹಾರಥೋತ್ಸವ, ಮೇ 19ರ ಸಂಜೆ 5.30ಕ್ಕೆ ಕಡುಬಿನ ಕಾಳಗ ಹಾಗೂ ಮೇ 20ರ ಸಂಜೆ ಓಕಳಿ ಕಾರ್ಯಕ್ರಮ ಜರುಗಲಿದೆ.
ದೇವಸ್ಥಾನದ ಇತಿಹಾಸ: ಸಾಹಿತ್ಯ, ಶಿಲ್ಪಕಲಾ ಕ್ಷೇತ್ರದಲ್ಲಿ ಪುಲಿಗೆರೆ (ಲಕ್ಷ್ಮೇಶ್ವರ) ಸೋಮೇಶ್ವರನಿಗೆ ದೊರೆತ ಮನ್ನಣೆ ಅಪಾರ. ಕ್ರಿ.ಶ 6ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದ ಪುಲಿಗೆರೆ ಮುನ್ನೂರು ಎಂಬುದೊಂದು ಪ್ರಾಂತ್ಯವಾಗಿತ್ತು. 11ನೇ ಶತಮಾನದಲ್ಲಿ ಈ ಪ್ರಾಂತ್ಯವನ್ನಾಳುತ್ತಿದ್ದ ಸರ್ವೇಶ್ವರನೆಂಬ ಮಾಂಡಲಿಕ ದೊರೆ ತನ್ನ ಮಗ ಸೋಮದೇವನ ಜನ್ಮೋತ್ಸವ ಶುಭ ಸಂದರ್ಭದಲ್ಲಿ ಈ ದೇವಸ್ಥಾನ ಕಟ್ಟಿಸಿದನೆಂಬುದು ಇತಿಹಾಸ. ಈ ಕಾಲಾವಧಿಯಲ್ಲಿ ಸೌರಾಷ್ಟçದಿಂದ ಮುತ್ತು-ರತ್ನ ವ್ಯಾಪಾರಕ್ಕಾಗಿ ಪುಲಿಗೆರೆಗೆ ಬರುತ್ತಿದ್ದ ಆದಯ್ಯನೆಂಬ ಶಿವಭಕ್ತ ತನ್ನ ಮಾವನೊಂದಿಗೆ ನಡೆದ ಮಾತುಕತೆಯ ಪ್ರತಿಷ್ಠೆಯಿಂದಾಗಿ ಸೌರಾಷ್ಟçದಿಂದ ಸ್ವಯಂಭೂ ಸೋಮೇಶ್ವರನ ಮೂರ್ತಿಯನ್ನು ತಂದು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದನೆಂಬ ಪ್ರತೀತವಿದೆ.
ದೇವಸ್ಥಾನದ ವೈಶಿಷ್ಟ್ಯ: ದೇವಸ್ಥಾನವು ಹೊಯ್ಸಳ ವಾಸ್ತು ಶಿಲ್ಪದಂತೆ ನಕ್ಷತ್ರಾಕಾರದಲ್ಲಿದೆ. ಹೊರಭಾಗದಲ್ಲಿ ಭೈರವಿ, ಶಿವ, ವಿಷ್ಣು, ನಟರಾಜ, ಗಣೇಶ, ವೀರಭದ್ರ, ವೇಣುಗೋಪಾಲ, ಯಕ್ಷ-ಯಕ್ಷಿಣಿಯರ ಶಿಲ್ಪ ಕಲಾಕೃತಿಗಳು ಆಕರ್ಷಣೀಯವಾಗಿವೆ. ಒಳಗೆ ಗರ್ಭಗೃಹ, ಅಂತರಾಳ, ನವರಂಗ ಮ್ತತು 49 ವಿಶಿಷ್ಠ ಕಂಬಗಳ ರಂಗಮಂಟಪವಿದೆ. ಪೂರ್ವ, ದಕ್ಷಿಣ ಮತ್ತು ಉತ್ತರಕ್ಕೆ ಪ್ರವೇಶ ದ್ವಾರಗಳಿವೆ.
ಗರ್ಭಗೃಹದಲ್ಲಿ ಪರಮೇಶ್ವರನು ಪಾರ್ವತಿಯೊಂದಿಗೆ ನಂದಿಯ ಮೇಲೇರಿ ಹೊರಟಂತಿರುವ ದಕ್ಷಿಣ ಭಾರತದಲ್ಲಿಯೇ ಅತ್ಯಪರೂಪದ ಸ್ವಯಂಭೂ ಶ್ರೀ ಸೋಮೇಶ್ವರನ ವಿಗ್ರಹವಿದೆ. 21 ಎಕರೆ ವಿಸ್ತಾರವುಳ್ಳ ಪ್ರಾಂಗಣದಲ್ಲಿ ಲಜ್ಜಾಗೌರಿ ದೇವಸ್ಥಾನ, ಗಣೇಶ, ದಂಡೇಶ್ವರ, ಚಂದ್ರಮೌಳೇಶ್ವರ, ತ್ರಿಕೂಟಾಚಲ, ವೀರಭದ್ರೇಶ್ವರ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ದೇವ ಮಂಟಪಗಳನ್ನೊಳಗೊಂಡ ದೇವಾಲಯಗಳ ಸಮುಚ್ಛಯವೇ ಇದೆ. ದೇವಸ್ಥಾನದ ಪಶ್ಚಿಮಕ್ಕೆ ಗೌರಾಂಬಿಕೆ ಎಂಬ ಮಹಿಳೆಯಿಂದ ನಿರ್ಮಿಸಲ್ಪಟ್ಟ ಸುಂದರವಾದ ಕಲ್ಯಾಣಿ ಇದೆ.
ಸೂರ್ಯನ ಕಿರಣಗಳು ನೇರ ಮೂರ್ತಿಗೆ
ಪ್ರತಿವರ್ಷ ಮೇ ತಿಂಗಳ ಮಾಘಶುದ್ಧ ಬಹುಳ ನಕ್ಷತ್ರದಂದು ಅಂದರೆ ಸರಿಸುಮಾರು ಮೇ 25ರಿಂದ 30ರ ಅವಧಿಯಲ್ಲಿ ಸುರ್ಯೋದಯದ ಹೊಂಗಿರಣಗಳು ಶ್ರೀ ಸೋಮೇಶ್ವರ ಮೂರ್ತಿಯ ಮೇಲೆ ಪ್ರಕಾಶಿಸುವಂತೆ ಕಟ್ಟಿರುವುದೇ ಇಲ್ಲಿನ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಶಿಥಿಲಾವಸ್ಥೆ ತಲುಪಿದ್ದ ದೇವಸ್ಥಾನವನ್ನು ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾ ನಾರಾಯಣಮೂರ್ತಿಯವರು 2014ರಲ್ಲಿ 5 ಕೋಟಿ ರೂ ಖರ್ಚು ಮಾಡಿ ಜೀರ್ಣೋದ್ಧಾರಗೊಳಿಸಿ ಪ್ರತಿವರ್ಷ ಪ್ರತಿಷ್ಠಾನದಿಂದ 3 ದಿನ `ಪುಲಿಗೆರೆ ಉತ್ಸವ’ದ ಮೂಲಕ ಇಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಪಾರಂಪರಿಕ ಹಾಗೂ ಐತಿಹಾಸಿಕ ವೈಭವ ಮರುಕಳಿಸುವಂತೆ ಮಾಡಿದ್ದಾರೆ.