ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲ್ಲಿನ ಯಳವತ್ತಿ ಗ್ರಾಮದ ಶ್ರೀ ಗುಂಡೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವದ ನಿಮಿತ್ತ ಶನಿವಾರ ಗೋಧೂಳಿ ಸಮಯದಲ್ಲಿ ಅಪಾರ ಭಕ್ತ ಸಮೂಹದ ನಡುವೆ ಮಹಾರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾಮಹೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.
ಬೆಳಗಿನಿಂದಲೇ ಮಹಿಳೆಯರು, ಮಕ್ಕಳು ಹೊಸ ಉಡುಗೆ ಧರಿಸಿ ದೇವಸ್ಥಾನಕ್ಕೆ ಆಗಮಿಸಿ ಗುಂಡೇಶ್ವರನಿಗೆ ಶೃದ್ಧಾ-ಭಕ್ತಿಯಿಂದ ನಮಿಸಿದರು. ಹಣ್ಣು-ಕಾಯಿ ನೈವೇದ್ಯ ಮಾಡಿಸಿಕೊಂಡು ಬಳಿಕ ರಥಕ್ಕೆ ಉಡಿ ತುಂಬಿ, ಹೊಸ ವಸ್ತಾçಭರಣಗಳನ್ನಿರಿಸಿ ಪೂಜಿಸಿದರು.
ಶನಿವಾರ ಸಂಜೆ ಅಪಾರ ಭಕ್ತ ಸಮೂಹದೊಂದಿಗೆ ಜರುಗಿದ ಮಹಾರಥೋತ್ಸವದಲ್ಲಿ ಅಪಾರ ಭಕ್ತ ಸಮೂಹ ಪಾಲ್ಗೊಂಡು ಭಕ್ತಿ-ಭಾವಗಳಿಂದ ಉತ್ತತ್ತಿ, ಹಣ್ಣುಗಳನ್ನು ತೇರಿಗೆ ಎಸೆದರು. ಯುವಕರು ತೇರಿನ ಕಳಸಕ್ಕೆ ಗುರಿಯಿಟ್ಟು ಹಣ್ಣು, ಉತ್ತತ್ತಿ ಎಸೆಯುತ್ತಿದ್ದ ದೃಶ್ಯ ಕಂಡು ಬಂದಿತು. ಭಾನುವಾರ ಸಂಜೆ ಕಡುಬಿನ ಕಾಳಗ ಜರುಗಲಿದೆ.