ನಾಸ್ತಿಕನಾಗಿಯೇ ಗುರುತಿಸಿಕೊಂಡಿರುವ ಹಿರಿಯ ಸಾಹಿತಿ ಜಾವೇದ್ ಅಖ್ತರ್ ಇದೀಗ ಫೇಕ್ ನ್ಯೂಸ್ ಬಲಿಯಾಗಿದ್ದಾರೆ. ದೇವರ ಅಸ್ತಿತ್ವವನ್ನೇ ಪ್ರಶ್ನಿಸುವ ವ್ಯಕ್ತಿಯಾಗಿರುವ ಜಾವೇದ್ ಅಖ್ತರ್ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ, ನಮಾಜ್ ಆರಂಭಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ.
ಜಾವೇದ್ ಅಖ್ತರ್ ತಲೆಗೆ ಮುಸ್ಲಿಂ ಟೋಪಿ ಹಾಕಿಕೊಂಡಿರುವ ನಕಲಿ ಫೋಟೋ ಮತ್ತು ವಿಡಿಯೋವನ್ನು ವೈರಲ್ ಮಾಡಿ, “ಅವರು ಅಲ್ಲಾ ಇರುವುದನ್ನು ಒಪ್ಪಿಕೊಂಡಿದ್ದಾರೆ, ಪಕ್ಕಾ ಮುಸಲ್ಮಾನ ಆಗಿದ್ದಾರೆ” ಎಂದು ವದಂತಿ ಹಬ್ಬಿಸಲಾಗಿದೆ. ಈ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಜಾವೇದ್ ಅಖ್ತರ್, ಇದು ಎಐ ಮೂಲಕ ಸೃಷ್ಟಿಸಿದ ಫೇಕ್ ಚಿತ್ರ ಎಂದು ಹೇಳಿದ್ದಾರೆ.
“ನಾನು ದೇವರನ್ನು ಒಪ್ಪಿಕೊಂಡಿದ್ದೇನೆ ಎಂಬುದು ಸಂಪೂರ್ಣ ಸುಳ್ಳು. ಈ ರೀತಿಯ ಫೇಕ್ ನ್ಯೂಸ್ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಈ ಸುಳ್ಳಿಗೆ ಕಾರಣರಾದವರನ್ನು ಕಾನೂನಿನ ಮೂಲಕ ಹಿಡಿಯುತ್ತೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೇಕ್ ವಿಡಿಯೋ ಫಾರ್ವರ್ಡ್ ಮಾಡಿದವರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಾವೇದ್ ಅಖ್ತರ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ‘ದೇವರು ಇದ್ದಾನಾ?’ ಎಂಬ ವಿಷಯದ ಚರ್ಚೆಯಲ್ಲಿ ಜಾವೇದ್ ಅಖ್ತರ್ ಭಾಗವಹಿಸಿದ್ದರು. ಆ ಚರ್ಚೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ರೀತಿಯ ಎಐ ಫೇಕ್ ಫೋಟೋ ಹರಡಿರುವುದು ಅನುಮಾನಕ್ಕೆ ಕಾರಣವಾಗಿದೆ.



