ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತಗುಡ್ಡ ವನ್ಯಜೀವಿಧಾಮ ಪರಿಧಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸುವ ಕುರಿತು ಕೇಂದ್ರ ಸರಕಾರಕ್ಕೆ ತಕ್ಷಣ ಆಕ್ಷೇಪಣಾ ಪತ್ರ ಸಲ್ಲಿಸುವಂತೆ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಜಯ ಕರ್ನಾಟಕ ಸಂಘಟನೆಯ ಗದಗ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಚಂದ್ರಕಾAತ ಚವ್ಹಾಣ, ಕಪ್ಪತ್ತಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುತ್ತದೆ. ಪಂಚಲೋಹಗಳ ಗುಡ್ಡವಾಗಿರುವುದರಿಂದ ಇಲ್ಲಿ ಬೆಳೆಯುವ ವನಸ್ಪತಿಗಳು ನಾನಾ ರೋಗಗಳ ನಿವಾರಣೆಗೆ ಪರಿಣಾಮಕಾರಿಯಾಗಿವೆ. ಕಪ್ಪತ್ತಗುಡ್ಡ ಇಂದಿಗೂ ತನ್ನ ಮಣ್ಣು, ಗಿಡ, ಮರಗಳೆಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ. ಸುಮಾರು 500ಕ್ಕೂ ಹೆಚ್ಚು ಔಷಧಿ ಸಸ್ಯರಾಶಿಯೂ ಗಿಡಮೂಲಿಕೆಗಳು ಇಲ್ಲಿವೆ.
ಜಿಲ್ಲೆಯಲ್ಲಿ ಕಪ್ಪತಗುಡ್ಡ ಸೇರಿದಂತೆ ಕೇವಲ ಶೇ.೭ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಒಂದು ವೇಳೆ ಕಪ್ಪತಗುಡ್ಡ ಕರಗಿದರೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೇ ಇಲ್ಲದಂತಾಗುತ್ತದೆ. ಇದರಿಂದ ಕೃಷಿ, ಜನ-ಜಾನುವಾರು, ವನ್ಯಜೀವಿಗಳಿಗೆ ಮರಣ ಶಾಸನ ಬರೆದಂತಾಗುತ್ತದೆ. ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹುನ್ನಾರ ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಉಪಾಧ್ಯಕ್ಷ ಭಾಷಾಸಾಬ ಮಲ್ಲಸಮುದ್ರ ಮಾತನಾಡಿ, ಅರಣ್ಯ ಇಲಾಖೆಗೆ ಕಂಪನಿಗಳ ಅರ್ಜಿ ತಿರಸ್ಕರಿಸಿದರೂ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಪದೇ ಪದೇ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಸಹ್ಯಾದ್ರಿ, ಜೀವವೈವಿಧ್ಯ ತಾಣ, ಅಪಾರ ಖನಿಜ ಸಂಪತ್ತಿನ ಆಗರ ಕಪ್ಪತಗುಡ್ಡ ನೆತ್ತಿ ಮೇಲೆ ಆತಂಕದ ಕತ್ತಿ ನೇತಾಡುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ಪರಿಸರ ಸಮತೋಲನ ಕಾಯುವ ಕಪ್ಪತಗುಡ್ಡಕ್ಕೆ ಎದುರಾಗಿರುವ ಆತಂಕವು ನಿದ್ದೆಗೆಡಿಸಿದೆ ಎಂದರು.